ಉದಯವಾಹಿನಿ, ಬೆಂಗಳೂರು: ಮನರೇಗಾ ರದ್ದುಪಡಿಸಿ ವಿಬಿ ಜಿ ರಾಮ್ ಜಿ ಕಾಯ್ದೆ ಜಾರಿಗೊಳಿಸಿದ ಕೇಂದ್ರ ಸರ್ಕಾರದ ಕುತಂತ್ರವನ್ನ ರಾಜ್ಯದ ರೈತರು ಒಕ್ಕೊರಲಿನಿಂದ ವಿರೋಧಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅಂತರರಾಷ್ಟ್ರೀಯ ವಾಣಿಜ್ಯ ಮೇಳ-2026 ಉತ್ಪಾದನೋತ್ತರ ಕೃಷಿ – ರೈತರ ಸಬಲೀಕರಣ ಹಾಗೂ ರಾಜ್ಯಮಟ್ಟದ ಕೃಷಿ ಪಂಡಿತ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ನಮ್ಮ ಸರ್ಕಾರ ಕೃಷಿ ಕ್ಷೇತ್ರಕ್ಕೆ ಎಂದಿಗೂ ಬೆಂಬಲವಾಗಿ ನಿಂತಿದೆ. ಕೃಷಿ ಲಾಭದಾಯಕವಾಗಿಸಲು ಹಾಗೂ ಕೃಷಿಕರ ಸಬಲೀಕರಣವನ್ನು ಸಾಧಿಸಲು ಸರ್ಕಾರ ಹೆಚ್ಚಿನ ಒತ್ತು ನೀಡುತ್ತದೆ. ಕೃಷಿ ಹಾಗೂ ಉತ್ಪಾದನೋತ್ತರ ಚಟುವಟಿಕೆಗಳಲ್ಲಿ ರೈತರು ತೊಡಗಿಕೊಳ್ಳುವ ಮೂಲಕ ಕೃಷಿಯನ್ನು ಲಾಭದಾಯಕಗೊಳಿಸಬಹುದಾಗಿದೆ. ರೈತರು ಉದ್ಯಮಿಗಳಾಗಬೇಕು. ಉತ್ಪನ್ನಗಳನ್ನು ಬೆಳೆಯುವ ಜೊತೆಗೆ, ಸಂಗ್ರಹಣೆ, ಸಂಸ್ಕರಣೆ, ಪ್ಯಾಕೇಜಿಂಗ್, ಮಾರುಕಟ್ಟೆ, ಉಪಉತ್ಪನ್ನಗಳ ಅಭಿವೃದ್ಧಿಯಲ್ಲಿ ರೈತರು ನಿರತರಾಗಬೇಕಿದೆ. ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ತೊಡಗಿಕೊಳ್ಳುವುದು ಅಗತ್ಯ. ಇಂದಿನ ಪ್ರಶಸ್ತಿಗೆ ಭಾಜನರಾದ ಮಹಿಳಾ ಕೃಷಿಕರ ಸಾಧನೆ ಸ್ಪೂರ್ತಿದಾಯಕವಾಗಿದೆ ಎಂದರು.

ರೈತರಿಗೆ ಉತ್ತಮವಾದ ಬಿತ್ತನೆ ಬೀಜ, ಗೊಬ್ಬರ, ಔಷಧಿಯನ್ನು ಸರ್ಕಾರ ಒದಗಿಸುತ್ತಿದ್ದು, ಯಂತ್ರೋಪಕರಣಗಳ ಖರೀದಿಗೆ 1,500 ಕೋಟಿ ಸಹಾಯಧನವನ್ನು ನೀಡಲಾಗುತ್ತಿದೆ. ಬೆಳೆವಿಮೆ ಯೋಜನೆ ಜಾರಿಯಲ್ಲಿ ಕರ್ನಾಟಕ ದೇಶದಲ್ಲಿ ನಂ.1 ರಾಜ್ಯವಾಗಿದ್ದು, ಈವರೆಗೆ 6000 ಕೋಟಿ ರೂ. ವಿಮೆಪರಿಹಾರವನ್ನು ರೈತರಿಗೆ ವಿತರಿಸಲಾಗಿದೆ. ಕಬ್ಬು, ರಾಗಿ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಸುವುದಕ್ಕೆ ರೈತರು ಸೀಮಿತವಾಗುತ್ತಿದ್ದಾರೆ. ಆದರೆ, ಬೆಳೆ ತೆಗೆದ ನಂತರ ಚಟುವಟಿಕೆಗಳಲ್ಲಿ ರೈತರು ಕೈಗೊಳ್ಳಬೇಕು. ಕಬ್ಬು ಬೆಳೆ ರೈತರೊಂದಿಗೆ ಚರ್ಚಿಸಿ ಸಂಧಾನ ನಡೆಸಿ ಕಬ್ಬು ಬೆಳೆಗೆ ಬೆಲೆ ನಿಗದಿ ಪಡಿಸಲಾಯಿತು. ಅಂತೆಯೇ ತೊಗರಿ ಬೆಳೆಗೆ ಖರೀದಿ ಕೇಂದ್ರವನ್ನು ಒಂದು ತಿಂಗಳ ಮುಂಚೆಯೇ ತೆರೆದು ರೈತರಿಗೆ ಅನುಕೂಲ ಕಲ್ಪಿಸಲಾಯಿತು. ಮೆಕ್ಕೆಜೋಳ ಹೆಚ್ಚುವರಿ ಇಳುವರಿ ಬಂದು 54 ಲಕ್ಷ ಮೆಟ್ರಿಕ್‌ ಟನ್ ಉತ್ಪಾದನೆಯಾಗಬಹುದಾಗಿದೆ. ಆದ್ದರಿಂದ ಕೇಂದ್ರ ಕ್ವಿಂಟಾಲ್‌ವೊಂದಕ್ಕೆ 2400 ರೂ. ನಿಗದಿಪಡಿಸಿದ್ದು, ಮೆಕ್ಕೆಜೋಳ ಬಳಸುವ ಕಾರ್ಖಾನೆಗಳು, ಎಥನಾಲ್ ತಯಾರಕರೊಂದಿಗೆ ಚರ್ಚೆ ನಡೆಸಿ, 40 ಲಕ್ಷ ಮೆಟ್ರಿಕ್‌ ಟನ್ ಮೆಕ್ಕೆಜೋಳ ಖರೀದಿಗೆ ಅನುವು ಮಾಡಿಕೊಡಲಾಯಿತು ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!