ಉದಯವಾಹಿನಿ, ಗಡ್ಚಿರೋಲಿ: ಛತ್ತೀಸ್‌ಗಢದ ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ತೀವ್ರ ಗುಂಡಿನ ಚಕಮಕಿಯಲ್ಲಿ ಮೂವರು ನಕ್ಸಲರನ್ನು ಹತ್ಯೆ ಮಾಡಲಾಗಿದೆ. ಈ ಕಾರ್ಯಾಚರಣೆಯಲ್ಲಿ ಸಿ-60 (C-60) ಕಮಾಂಡೋ ಯೂನಿಟ್‌ನ ಒಬ್ಬ ಪೊಲೀಸ್ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಗಡ್ಚಿರೋಲಿ ಜಿಲ್ಲೆಯ ಅಬುಜ್ಮದ್ ಎಂಬ ಅರಣ್ಯ ಪ್ರದೇಶದಲ್ಲಿ ಇಂದು ಬೆಳಗ್ಗೆ ಭದ್ರತಾ ಪಡೆಗಳು ನಡೆಸಿದ ಗುಂಡಿನ ಚಕಮಕಿಯಲ್ಲಿ ಇಬ್ಬರು (ಒಬ್ಬರು ಪುರುಷ ಇನ್ನೊಬ್ಬರು ಮಹಿಳೆ) ನಕ್ಸಲರು ಮೃತಪಟ್ಟಿದ್ದು, ಅವರ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ, ಇಲ್ಲಿಯವರೆಗೆ ಒಟ್ಟು ಮೂವರು ನಕ್ಸಲರು ಸಾವನ್ನಪ್ಪಿದ್ದು, ಘಟನಾ ಸ್ಥಳದಿಂದ ಅವರ ಬಳಿ ಇದ್ದ ಒಂದು ಎಕೆ 47 ಮತ್ತು ಒಂದು ಎಸ್‌ಎಲ್‌ಆರ್ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯಕ್ಕೆ ಹತ್ಯೆಗೀಡಾದ ಮೂವರು ನಕ್ಸಲರ ಗುರುತುಗಳು ಇನ್ನೂ ದೃಢಪಟ್ಟಿಲ್ಲ.
ಗುಂಡಿನ ಚಕಮಕಿಯಲ್ಲಿ ಗಂಭೀರವಾಗಿ ಗಾಯಗೊಂಡ ಇಬ್ಬರು ಜವಾನರನ್ನು ತಕ್ಷಣ ವೈದ್ಯಕೀಯ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ವಿಮಾನದ ಮೂಲಕ ಸಾಗಿಸಲಾಯಿತು. ಆದರೆ, ಅವರಲ್ಲಿ ಒಬ್ಬರು ಭಮ್ರಗಢ ಉಪ ಜಿಲ್ಲಾ ಆಸ್ಪತ್ರೆಯಲ್ಲಿ ಹುತಾತ್ಮರಾಗಿದ್ದು, ಇನ್ನೊಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಸಿ-60 ಜವಾನನನ್ನು ಅಹೇರಿಯ ನಿವಾಸಿ ದೀಪಕ್ ಚಿನ್ನ ಮಾದವಿ (38) ಎಂದು ಗುರುತಿಸಲಾಗಿದೆ. ಗುರುವಾರ ರಾತ್ರಿ ನಡೆದ ಎನ್‌ಕೌಂಟರ್‌ನಲ್ಲಿ ಕಿಶ್ತ್ಯಪಲ್ಲಿ ನಿವಾಸಿ ಜೋಗ ಮಾದವಿ ಎಂಬ ಮತ್ತೊಬ್ಬ ಜವಾನನಿಗೆ ಗುಂಡು ತಗುಲಿತ್ತು. ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
