ಉದಯವಾಹಿನಿ, ಪಿಥೋರಗಢ (ಉತ್ತರಾಖಂಡ): ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಬಸ್ 150 ಮೀಟರ್ ಆಳದ ಕಂದಕಕ್ಕೆ ಉರುಳಿ ಬಿದ್ದು ಕನಿಷ್ಠ 13 ಜನರು ಸಾವನ್ನಪ್ಪಿ, ಸುಮಾರು ಮೂರು ಡಜನ್ ಜನರು ಗಾಯಗೊಂಡಿರುವ ಘಟನೆ ಉತ್ತರಾಖಂಡದ ಪಿಥೋರಗಢ ಜಿಲ್ಲೆ ಮತ್ತು ನೇಪಾಳದ ಗಡಿಯಲ್ಲಿ ನಡೆದಿದೆ.
ದೇಶದ ಗಡಿ ಪಟ್ಟಣವಾದ ಜುಲಾಘಾಟ್ ಬಳಿಯ ನೇಪಾಳದ ಸುದೂರ್‌ಪಾಶ್ಚಿಮ್ ಪ್ರಾಂತ್ಯದ ಬೈತಾಡಿಯಲ್ಲಿ ಗುರುವಾರ ರಾತ್ರಿ ಬಸ್ ದುರಂತ ಸಂಭವಿದೆ. ಅಪಘಾತದಲ್ಲಿ 13 ಅತಿಥಿಗಳು ಸಾವನ್ನಪ್ಪಿದ್ದಾರೆ ಮತ್ತು 34 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೈತಾಡಿಯ ಪುರ್ಚುನಿ ಪುರಸಭೆ ವ್ಯಾಪ್ತಿಯ ಭಾವ್ನೆ ಗ್ರಾಮದಿಂದ ಬಜಂಗ್‌ನ ಸುಂಕುಡಾಗೆ ಮದುವೆ ಕಾರ್ಯಕ್ರಮಕ್ಕೆ ಜನರನ್ನು ಹೊತ್ತು ಬಸ್ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿ ಕಮರಿಗೆ ಉರುಳಿದೆ. ಸ್ಥಳೀಯ ನಿವಾಸಿಗಳು ತಕ್ಷಣವೇ ಗಾಯಾಳುಗಳನ್ನು ರಕ್ಷಿಸಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಸ್ಥಳೀಯ ನಿವಾಸಿಗಳು, ನೇಪಾಳ ಸಶಸ್ತ್ರ ಪೊಲೀಸ್ ಪಡೆ ಹಾಗೂ ಪೊಲೀಸರು ರಾತ್ರಿಯಿಡೀ ಪ್ರಯಾಣಿಕರನ್ನು ರಕ್ಷಿಸಿದರು ಎಂದು ಬೈತಾಡಿ ಜಿಲ್ಲಾ ಪೊಲೀಸ್ ಕಚೇರಿಯ ವಕ್ತಾರ ಇನ್ಸ್‌ಪೆಕ್ಟರ್ ಬಲದೇವ್ ಬಾಡು ಮಾಹಿತಿ ನೀಡಿದ್ದಾರೆ.
ಮೃತರ ಮಾಹಿತಿ: ಬಿಥಾಡ್ ಚಿರ್ ಗ್ರಾಮದ ನಿವಾಸಿಗಳಾದ ಕೇಶವ್ ರಾಜ್ ಜೋಶಿ (40), ಅಶೋಕ್ ರಾಜ್ ಜೋಶಿ (13), ಬಸಂತ್ ರಾಜ್ ಜೋಶಿ (35), ವಿಷ್ಣು ದತ್ ಜೋಶಿ (41), ನರೇಶ್ ರಾಜ್ ಜೋಶಿ (42), ಬಿಷನ್ ದತ್ ಜೋಶಿ (17), ದೀಪಕ್ ಜೋಶಿ (28), ಮತ್ತು ಕಿಶನ್ ಜೋಶಿ (46) ಹಾಗೂ ಕೇದಾರಸ್ಯು ಗ್ರಾಮದ ಮೋಹನ್ ದೇವ್ ಭಟ್ (60) ಮತ್ತು ಕೇಶವ್ ಭಟ್ (27), ಬಜಂಗ್‌ನಲ್ಲಿರುವ ಬಸಂತ್ ರಾಜ್ ರತ್ಲಾ (40) ಮತ್ತು ಬೈತಾಡಿಯ ಪುಷ್ಪಾ ಅವಸ್ಥಿ (40) ಮತ್ತು ಸುಶೀಲ್ ಜೋಶಿ ಮೃತವರೆಂದು ಗುರುತಿಸಲಾಗಿದೆ.
