ಉದಯವಾಹಿನಿ, ರಾಜ್‌ಕೋಟ್ (ಗುಜರಾತ್): ದೈಹಿಕವಾಗಿ ಶೇ. 90 ರಷ್ಟು ವಿಕಲಚೇತನನಾಗಿರುವ ವ್ಯಕ್ತಿಯೋರ್ವ 15 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರವೆಸಗಿರುವುದು ಸಾಬೀತಾಗಿರುವ ಹಿನ್ನೆಲೆ ಆತನಿಗೆ ಕೋರ್ಟ್ 20 ವರ್ಷಗಳ ಕಠಿಣ ಶಿಕ್ಷೆ ಪ್ರಕಟಿಸಿದೆ.ಕಳೆದ ವರ್ಷ ಭಯವದರ್, ಬಳಿಯ ಗ್ರಾಮವೊಂದರಲ್ಲಿ ಈ ಪ್ರಕರಣ ನಡೆದಿತ್ತು. ಸುರೇಶ್ ದಾಲ್ಸಿಂಗ್ಭಾಯಿ ಮಾವಿ ಎಂಬಾತನಿಗೆ ಧೋರಾಜಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೊಕ್ಸೊ ವಿಶೇಷ ನ್ಯಾಯಾಧೀಶ ಅಲಿ ಹುಸೇನ್ ಮೊಹಿಬುಲ್ಲಾ ಶೇಖ್ ಅವರು 20 ವರ್ಷಗಳ ಕಠಿಣ ಶಿಕ್ಷೆ ಮತ್ತು 5 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಅಲ್ಲದೆ ಸಂತ್ರಸ್ತೆಗೆ ಸರ್ಕಾರದಿಂದ 7 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸೂಚಿಸಿದರು.
ರಾಜ್‌ಕೋಟ್ ಜಿಲ್ಲೆಯ ಭಯವದರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2025 ರಲ್ಲಿ 15 ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದ ವಿಚಾರಣೆ ಪೂರ್ಣಗೊಂಡ ಬಳಿಕ ಬುಧವಾರ(ಫೆ.4) ಈ ತೀರ್ಪು ಪ್ರಕಟವಾಗಿದೆ.
ಪ್ರಕರಣದ ವಿವರ: ಆರೋಪಿ ಸುರೇಶ್ ಮಾವಿ ಜೂನ್ 12, 2025 ರಂದು ಬಾಲಕಿಯನ್ನು ತನ್ನ ಸಹಚರನ ಮೂಲಕ ಅಪಹರಿಸಿದ್ದ, ಮದುವೆಯ ಹುಸಿ ಭರವಸೆ ನೀಡಿ ಆಕೆಗೆ ಆಮಿಷವೊಡ್ಡಿ ಈ ಕೃತ್ಯ ಎಸಗಿರುವುದು ಸಾಬೀತಾಗಿತ್ತು. ಭಯವದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯ ಸಮಯದಲ್ಲಿ, ಆರೋಪಿಯು ಬಾಲಕಿಯನ್ನು ತನ್ನ ಊರಾದ ಅಹಮದಾಬಾದ್‌ಗೆ ಕರೆದೊಯ್ದು, ಆಕೆಯ ಇಚ್ಛೆಗೆ ವಿರುದ್ಧವಾಗಿ ಪದೇ ಪದೆ ಲೈಂಗಿಕ ಸಂಭೋಗದಲ್ಲಿ ತೊಡಗಿದ್ದ ಎಂಬುದು ಪೊಲೀಸರ ತನಿಖೆಯಲ್ಲಿ ದೃಢಪಟ್ಟಿತ್ತು.
