ಉದಯವಾಹಿನಿ, ಅಥೆನ್ಸ್, ಗ್ರೀಸ್; ದಾಖಲೆಗಳಿಲ್ಲದ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಸ್ಪೀಡ್‌ಬೋಟ್ ಗ್ರೀಕ್ ಕರಾವಳಿ ಕಾವಲು ಪಡೆಯ ಗಸ್ತು ಹಡಗಿಗೆ ಡಿಕ್ಕಿ ಹೊಡೆದು, ಪೂರ್ವ ಗ್ರೀಕ್ ದ್ವೀಪ ಚಿಯೋಸ್‌ನ ಏಜಿಯನ್ ಸಮುದ್ರದಲ್ಲಿ ಮುಳುಗಿದೆ. ಈ ಘಟನೆಯಲ್ಲಿ ಕನಿಷ್ಠ 15 ವಲಸಿಗರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ನಡೆದ ಅತ್ಯಂತ ಮಾರಕ ಘಟನೆ ಇದಾಗಿದೆ ಎಂದು ಸಿಎನ್​ಎನ್​ ವರದಿ ಮಾಡಿದೆ. ಟರ್ಕಿಶ್ ಕರಾವಳಿಯಿಂದ ಹಲವಾರು ಮೈಲಿಗಳಷ್ಟು ದೂರದಲ್ಲಿರುವ ಮೆರ್ಸಿನಿಡಿ ಬಳಿ ಕರಾವಳಿಯ ಕಡೆಗೆ ವಲಸಿಗರಿಂದ ತುಂಬಿದ ಸ್ಪೀಡ್‌ಬೋಟ್ ತೆರಳುತ್ತಿತ್ತು. ಈ ವೇಳೆ ಗ್ರೀಕ್​ ಕರಾವಳಿ ಕಾವಲು ಪಡೆಯ ಗಸ್ತು ಹಡಗಿಗೆ ಡಿಕ್ಕೆ ಹೊಡೆದು ಮುಳುಗಿದೆ ಎಂದು ಹೆಲೆನಿಕ್ ಕೋಸ್ಟ್ ಗಾರ್ಡ್ ತಿಳಿಸಿದೆ.

ಅಧಿಕೃತ ಹೇಳಿಕೆಯ ಪ್ರಕಾರ, ಅದರ ಗಸ್ತು ದೋಣಿಗಳಲ್ಲಿ ಒಂದು ಮಂಗಳವಾರ ತಡರಾತ್ರಿ ನ್ಯಾವಿಗೇಷನ್ ಲೈಟ್‌ಗಳಿಲ್ಲದೇ ಚಿಯೋಸ್ ಕಡೆಗೆ ಪ್ರಯಾಣಿಸುತ್ತಿದ್ದ ಬೋಟ್​ ಗುರುತಿಸಿತು ಮತ್ತು ಅದನ್ನು ನಿಲ್ಲಿಸಲು ಧ್ವನಿ ಮತ್ತು ದೃಶ್ಯ ಸಂಕೇತಗಳನ್ನು ನೀಡಿತು. ಆದರೆ ಬೋಟ್​, ಅದನ್ನು ಅನುಸರಿಸುವ ಬದಲು ಕೋಸ್ಟ್ ಗಾರ್ಡ್ ಗಸ್ತು ದೋಣಿಯ ಸ್ಟಾರ್‌ಬೋರ್ಡ್ ಬದಿಗೆ ಡಿಕ್ಕಿ ಹೊಡೆದು ದೋಣಿ ಮಗುಚಿ ಮುಳುಗಲು ಕಾರಣವಾಯಿತು ಎಂದು ಕೋಸ್ಟ್ ಗಾರ್ಡ್ ಹೇಳಿಕೆ ತಿಳಿಸಿದೆ. ರಕ್ಷಣಾ ಪ್ರಯತ್ನಗಳನ್ನು ತಕ್ಷಣವೇ ಪ್ರಾರಂಭಿಸಲಾಯಿತು. ಇದರಲ್ಲಿ ಸುಮಾರು ಕನಿಷ್ಠ 25 ವಲಸಿಗರನ್ನು ನೀರಿನಿಂದ ಹೊರತೆಗೆದು ಬದುಕಿಸಲಾಗಿದೆ. ಅಸ್ವಸ್ಥಗೊಂಡಿದ್ದ ಅವರನ್ನು ಚಿಯೋಸ್‌ನ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ಅವರಲ್ಲಿ 11 ಮಕ್ಕಳು ಸೇರಿದ್ದಾರೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಇಬ್ಬರು ಕರಾವಳಿ ಕಾವಲು ಅಧಿಕಾರಿಗಳಿಗೂ ಚಿಕಿತ್ಸೆ ನೀಡಲಾಗಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ.

11 ಪುರುಷರು ಮತ್ತು ಮೂವರು ಮಹಿಳೆಯರು ಸೇರಿದಂತೆ 14 ಜನರ ಶವಗಳನ್ನು ಸಮುದ್ರದಿಂದ ಹೊರತೆಗೆಯಲಾಗಿದೆ ಎಂದು ಕರಾವಳಿ ಕಾವಲು ಪಡೆ ದೃಢಪಡಿಸಿದೆ. ಆದರೆ, ಇನ್ನೊಬ್ಬ ಮಹಿಳೆ ನಂತರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 15ಕ್ಕೆ ತಲುಪಿದೆ. ರಕ್ಷಿಸಲ್ಪಟ್ಟ ಬದುಕುಳಿದವರಲ್ಲಿ ಕೆಲವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ವರದಿಯಾಗಿದೆ. ಆದರೆ, ಕಾಣೆಯಾದ ವ್ಯಕ್ತಿಗಳಿಗಾಗಿ ಹುಡುಕಾಟ ಮುಂದುವರೆದಿರುವುದರಿಂದ ಸ್ಪೀಡ್‌ಬೋಟ್‌ನಲ್ಲಿರುವ ಒಟ್ಟು ಜನರ ಸಂಖ್ಯೆ ಸ್ಪಷ್ಟವಾಗಿಲ್ಲ.

Leave a Reply

Your email address will not be published. Required fields are marked *

error: Content is protected !!