ಉದಯವಾಹಿನಿ, ಸೆಹೋರ್ (ಮಧ್ಯಪ್ರದೇಶ): ಭಾರತ- ಅಮೆರಿಕ ವ್ಯಾಪಾರ ಒಪ್ಪಂದದಲ್ಲಿ ಭಾರತದ ಕೃಷಿ ಕ್ಷೇತ್ರಕ್ಕೆ ಪೆಟ್ಟು ಬೀಳುವ ಸಾಧ್ಯತೆ ಇದೆ ಎಂಬ ಆರೋಪ ಮತ್ತು ಆತಂಕವನ್ನು ದೂರ ಮಾಡಲು ಕೇಂದ್ರ ಸರ್ಕಾರ ಹಲವು ಪ್ರಯತ್ನ ನಡೆಸುತ್ತಿದೆ. ಈ ಕುರಿತು ಸಾಲು ಸಾಲು ಸ್ಪಷ್ಟನೆಯನ್ನೂ ನೀಡಿದೆ.ಇಂದು ಕೇಂದ್ರ ಕೃಷಿ ಸಚಿವ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಇದೇ ವಿಷಯವಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. “ಭಾರತ-ಅಮೆರಿಕ ಒಪ್ಪಂದವು ಭಾರತೀಯ ರೈತರ ಹಿತದೃಷ್ಟಿಯಿಂದ ಉತ್ತಮವಾಗಿದೆ. ಏಕೆಂದರೆ ನಮ್ಮ ಬಾಸ್ಮತಿ ತಳಿಯ ಅಕ್ಕಿಯು ಅಮೆರಿಕದ ಮಾರುಕಟ್ಟೆಯನ್ನು ದೊಡ್ಡ ಮಟ್ಟದಲ್ಲಿ ಪ್ರವೇಶಿಸಲಿದೆ” ಎಂದು ಹೇಳಿದರು.ಭಾರತ-ಅಮೆರಿಕ ಒಪ್ಪಂದದಲ್ಲಿ ಕೃಷಿ ಮತ್ತು ಡೈರಿ ಉತ್ಪನ್ನಗಳಿಗೆ ರಕ್ಷಣೆ ನೀಡಲಾಗಿದೆ. ವ್ಯಾಪಾರ ಒಪ್ಪಂದಕ್ಕಾಗಿ ಮಧ್ಯಂತರ ಚೌಕಟ್ಟಿನಲ್ಲಿ ರೈತರಿಗೆ ಪ್ರಯೋಜನವಾಗುವಂತೆ ಆದ್ಯತೆ ನೀಡಲಾಗಿದೆ ಎಂದು ಚೌಹಾಣ್ ಭರವಸೆ ನೀಡಿದರು.
ಈ ಒಪ್ಪಂದವು ಭಾರತೀಯ ವಸ್ತುಗಳ ರಫ್ತಿಗೆ ಅಮೆರಿಕದ ಮಾರುಕಟ್ಟೆಗಳನ್ನು ದೊಡ್ಡ ಪ್ರಮಾಣದಲ್ಲಿ ತೆರೆಯುತ್ತದೆ ಎಂದು ಹೇಳಿದ ಕೇಂದ್ರ ಸಚಿವರು, ಇದು ಅಲ್ಲಿನ ಪ್ರತಿ ಮನೆಗಳಲ್ಲಿ ಬೇಡಿಕೆ ಇರುವ ಬಾಸ್ಮತಿ ಅಕ್ಕಿಗೆ ದೊಡ್ಡ ಗ್ರಾಹಕರು ಸಿಗಲಿದ್ದಾರೆ. ನಮ್ಮ ಮಸಾಲೆ ಪದಾರ್ಥಗಳು ಅಮೆರಿಕಕ್ಕೆ ರಫ್ತಾಗಲಿವೆ. ಇದು ರೈತರ ಹಿತದೃಷ್ಟಿಯಿಂದ ಒಳ್ಳೆಯದು ಎಂದರು. ಭಾರತ- ಅಮೆರಿಕ ವ್ಯಾಪಾರ ಒಪ್ಪಂದ ಹೀಗಿದೆ: 2025ರ ಫೆಬ್ರವರಿಯಿಂದ ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದಕ್ಕೆ ಇಂದು (ಫೆಬ್ರವರಿ 7, 2026) ಅಂತಿಮ ಮುದ್ರೆ ಬಿದ್ದಿದೆ. ದ್ವಿಪಕ್ಷೀಯ ವ್ಯಾಪಾರ ಒಪ್ಪಂದ (ಬಿಟಿಎ) ಮಾತುಕತೆಗಳಿಗೆ ಉಭಯ ರಾಷ್ಟ್ರಗಳು ನಾಯಕರು ಸಹಿ ಹಾಕಿ ಜಂಟಿ ಹೇಳಿಕೆಯನ್ನು ಇಂದು ಪ್ರಕಟಿಸಲಾಯಿತು.
ಜಂಟಿ ಹೇಳಿಕೆಯ ಪ್ರಕಾರ ಭಾರತವು, ಅಮೆರಿಕದ ಕೈಗಾರಿಕಾ ಸರಕುಗಳು ಮತ್ತು ಒಣಗಿದ ಡಿಸ್ಟಿಲರ್‌ಗಳ ಧಾನ್ಯಗಳು (ಡಿಡಿಜಿಗಳು), ಪಶು ಆಹಾರಕ್ಕಾಗಿ ಕೆಂಪು ಸೋರ್ಗಮ್, ಮರದ ಬೀಜಗಳು, ತಾಜಾ ಮತ್ತು ಸಂಸ್ಕರಿಸಿದ ಹಣ್ಣುಗಳು, ಸೋಯಾಬೀನ್ ಎಣ್ಣೆ, ವೈನ್ ಮತ್ತು ಸ್ಪಿರಿಟ್‌ಗಳು ಮತ್ತು ಹೆಚ್ಚುವರಿ ಉತ್ಪನ್ನಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಆಹಾರ ಮತ್ತು ಕೃಷಿ ಉತ್ಪನ್ನಗಳ ಮೇಲಿನ ಸುಂಕವನ್ನು ತೆಗೆದುಹಾಕುವ ಅಥವಾ ಕಡಿಮೆ ಮಾಡಲಿದೆ ಎಂದಿದೆ.
ಇತ್ತ ಭಾರತದ ಯಾವೆಲ್ಲಾ ವಸ್ತುಗಳಿಗೆ ಅಮೆರಿಕವು ಸುಂಕ ಕಡಿಮೆ ಮಾಡಲಿದೆ ಅಥವಾ ತೆಗೆದು ಹಾಕಲಿದೆ ಎಂಬ ಬಗ್ಗೆಯೂ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು, ಭಾರತದ ರೈತರಿಗೆ ಅನುಕೂಲವಾಗುವ ಬದ್ಧತೆಯನ್ನು ತಿಳಿಸಿದರು. ಭಾರತ-ಯುಎಸ್ ವ್ಯಾಪಾರ ಒಪ್ಪಂದದಲ್ಲಿ ಡೈರಿ, ಹಣ್ಣುಗಳು, ತರಕಾರಿಗಳು, ಮಸಾಲೆಗಳು ಮತ್ತು ಇತರ ಧಾನ್ಯಗಳನ್ನು ರಕ್ಷಿಸಲಾಗಿದೆ ಎಂದು ಮಾಹಿತಿ ನೀಡಿದರು.
