ಉದಯವಾಹಿನಿ, ಕೋಟಾ (ರಾಜಸ್ಥಾನ): ಎರ್ನಾಕುಲಂ ನಿಜಾಮುದ್ದೀನ್ ದುರೊಂತೋ ಎಕ್ಸ್‌ಪ್ರೆಸ್‌ನಲ್ಲಿನ ಕೊಳಕು ಶೌಚಾಲಯ ವ್ಯವಸ್ಥೆಯನ್ನು ಪ್ರಶ್ನಿಸಿದ ಪ್ರಯಾಣಿಕನನ್ನು ಪ್ರಯಾಣ ಟಿಕೆಟ್​ ಪರೀಕ್ಷಕ (ಟಿಟಿಇ) ರೈಲಿನಿಂದಲೇ ಇಳಿಸಿ, ಆತನ ಮೇಲೆ ಹಲ್ಲೆಗೆ ಯತ್ನ ನಡೆಸಿದ ಆರೋಪ ಕೇಳಿಬಂದಿದೆ.
ಈ ಘಟನೆಯು 12283 ಸಂಖ್ಯೆಯ ಎರ್ನಾಕುಲಂ ನಿಜಾಮುದ್ದೀನ್ ದುರೊಂತೋ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಇಂದು ನಡೆದಿದೆ. ಟಿಟಿಇಯಿಂದ ದೌರ್ಜನ್ಯಕ್ಕೆ ಒಳಗಾದ ಪ್ರಯಾಣಿಕನನ್ನು ಮಂಗೇಶ್ ತಿವಾರಿ ಎಂದು ಗುರುತಿಸಲಾಗಿದೆ. ಟಿಟಿಇ ದೌರ್ಜನ್ಯವನ್ನು ಆತ ಮೊಬೈಲ್​ನಲ್ಲಿ ವಿಡಿಯೋ ಮಾಡಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು, ರೈಲ್ವೆ ಅಧಿಕಾರಿಗಳಿಗೆ ಟ್ಯಾಗ್​ ಮಾಡಿದ್ದಾನೆ.

ಪ್ರಯಾಣಿಕನ ಮೇಲೆ ಟಿಟಿಇ ಉದ್ಧಟತನ: ಕೋಟಾ ರೈಲ್ವೆ ವಿಭಾಗದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಸೌರಭ್ ಜೈನ್ ಅವರು ಘಟನೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ದೂರುದಾರ ಪ್ರಯಾಣಿಕ ದುರೊಂತೋ ಎಕ್ಸ್‌ಪ್ರೆಸ್‌ನ ಎರಡನೇ ಎಸಿ ಕೋಚ್ ಡಿಎಲ್ -1 ರಲ್ಲಿ ವಡೋದರಾದಿಂದ ನಿಜಾಮುದ್ದೀನ್‌ಗೆ ಪ್ರಯಾಣಿಸುತ್ತಿದ್ದ. ಈ ವೇಳೆ ಶೌಚಾಲಯದ ಕೊಳಕಿನ ಬಗ್ಗೆ ಟಿಟಿಇಗೆ ದೂರು ನೀಡಿದ್ದರು. ಟಿಟಿಇ ಮುಖೇಶ್ ಕುಮಾರ್ ಅವರು ರೈಲ್ವೆ ಸಿಬ್ಬಂದಿಯನ್ನು ಕರೆದರೂ, ಸ್ವಚ್ಛಗೊಳಿಸಲಾಗಿಲ್ಲ. ಪ್ರಯಾಣಿಕರು ಮತ್ತೆ ಟಿಟಿಇಗೆ ದೂರು ನೀಡಿದ್ದಾರೆ. ಇದರಿಂದ ಕೋಪಗೊಂಡ ಅಧಿಕಾರಿ ಪ್ರಯಾಣಿಕನನ್ನು ರತ್ಲಂ ನಿಲ್ದಾಣದಲ್ಲಿ ಇಳಿಸಿ, ಗಲಾಟೆ ಮಾಡಿದ್ದಾರೆ. ಇದರ ವಿಡಿಯೋ ಲಭ್ಯವಿದೆ. ಈ ಬಗ್ಗೆ ತನಿಖೆ ನಡೆಸಿ ದೆಹಲಿ ರೈಲ್ವೆ ಪ್ರಧಾನ ಕಚೇರಿಗೆ ವರದಿ ನೀಡಲಾಗುವುದು. ಟಿಟಿಇ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ರೈಲ್ವೆ ಮಂಡಳಿಯೂ ಈ ಬಗ್ಗೆ ತನಿಖೆ ನಡೆಸುತ್ತಿದೆ” ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!