ಉದಯವಾಹಿನಿ, ವಾಷಿಂಗ್ಟನ್ ಡಿಸಿ, ಅಮೆರಿಕ: ಟೆಹ್ರಾನ್ ಜೊತೆ ವ್ಯವಹಾರ ಮುಂದುವರಿಸುವ ದೇಶಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸುವ ಕಾರ್ಯಕಾರಿ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಸಹಿ ಹಾಕಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.
ಈ ಆದೇಶದ ಅಡಿ ಇರಾನ್‌ನಿಂದ ನೇರವಾಗಿ ಅಥವಾ ಪರೋಕ್ಷವಾಗಿ ಸರಕುಗಳು ಅಥವಾ ಸೇವೆಗಳನ್ನು ಖರೀದಿಸುವ, ಆಮದು ಮಾಡಿಕೊಳ್ಳುವ ಅಥವಾ ಪಡೆಯುವ ಯಾವುದೇ ದೇಶದಿಂದ ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಅಮೆರಿಕ ಹೆಚ್ಚುವರಿ ಸುಂಕವನ್ನು ವಿಧಿಸಬಹುದು. ಉದಾಹರಣೆಗೆ ಶೇಕಡಾ 25ರವರೆಗೆ ಈ ಸುಂಕ ಇರಲಿದೆ. ಈ ಕ್ರಮವು ಅಮೆರಿಕದ ರಾಷ್ಟ್ರೀಯ ಭದ್ರತೆ, ವಿದೇಶಾಂಗ ನೀತಿ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಆದೇಶವು ಇರಾನ್‌ನೊಂದಿಗೆ ಆರ್ಥಿಕ ಸಂಬಂಧಗಳನ್ನು ಕಾಯ್ದುಕೊಳ್ಳುವ ದೇಶಗಳಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಸುಂಕ ವಿಧಿಸಲು ವಾಷಿಂಗ್ಟನ್‌ಗೆ ಅವಕಾಶ ನೀಡಲಿದೆ. ಇನ್ನು ಪ್ರತೀಕಾರಕ್ಕೆ ಪ್ರತಿಕ್ರಿಯೆಯಾಗಿ ಪರಿಸ್ಥಿತಿಗಳು ಬದಲಾದರೆ ಅಥವಾ ಇರಾನ್ ಇಲ್ಲವೇ ಪೀಡಿತ ದೇಶವು ರಾಷ್ಟ್ರೀಯ ಭದ್ರತೆ, ವಿದೇಶಾಂಗ ನೀತಿ ಮತ್ತು ಆರ್ಥಿಕ ವಿಷಯಗಳಲ್ಲಿ ಅಮೆರಿಕದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಮಹತ್ವದ ಕ್ರಮಗಳನ್ನು ತೆಗೆದುಕೊಂಡರೆ, ಆಗ ಅಧ್ಯಕ್ಷರಿಗೆ ಕ್ರಮಗಳನ್ನು ಮಾರ್ಪಡಿಸುವ ಅಧಿಕಾರವನ್ನು ನೀಡುತ್ತದೆ ಎಂದು ಶ್ವೇತಭವನ ಸ್ಪಷ್ಟಪಡಿಸಿದೆ.

ಕಾರ್ಯಕಾರಿ ಆದೇಶವು ವಿದೇಶಾಂಗ ಕಾರ್ಯದರ್ಶಿ, ವಾಣಿಜ್ಯ ಕಾರ್ಯದರ್ಶಿ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನದ ವ್ಯಾಪಾರ ಪ್ರತಿನಿಧಿಗೆ ಸುಂಕ ವ್ಯವಸ್ಥೆ ಮತ್ತು ಸಂಬಂಧಿತ ಕ್ರಮಗಳನ್ನು ಜಾರಿಗೆ ತರಲು ನಿಯಮಗಳು ಮತ್ತು ಮಾರ್ಗದರ್ಶನ ನೀಡುವುದು ಸೇರಿದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಅಧಿಕಾರವನ್ನು ನೀಡುತ್ತದೆ.

ಶ್ವೇತಭವನದ ಪ್ರಕಾರ, ಟೆಹ್ರಾನ್‌ನ ಪರಮಾಣು ಸಾಮರ್ಥ್ಯಗಳ ಅನ್ವೇಷಣೆ, ಭಯೋತ್ಪಾದನೆಗೆ ಬೆಂಬಲ, ಬ್ಯಾಲಿಸ್ಟಿಕ್ ಕ್ಷಿಪಣಿ ಅಭಿವೃದ್ಧಿ ಮತ್ತು ಪ್ರಾದೇಶಿಕ ಅಸ್ಥಿರತೆ ಸೇರಿದಂತೆ ಇತರ ವಿಚಾರಗಳು ಸೇರಿವೆ. ಇರಾನ್​ ಆಡಳಿತವು ಮಧ್ಯಪ್ರಾಚ್ಯದಾದ್ಯಂತ ಪ್ರಾಕ್ಸಿ ಉಗ್ರಗಾಮಿ ಗುಂಪುಗಳನ್ನು ಬೆಂಬಲಿಸುತ್ತಿದೆ. ತನ್ನದೇ ಜನರ ಮೇಲೆ ಮಾರಣಾಂತಿಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ದೇಶೀಯ ಅಗತ್ಯಗಳ ಬದಲಿಗೆ ಪರಮಾಣು ಮತ್ತು ಕ್ಷಿಪಣಿ ಕಾರ್ಯಕ್ರಮಗಳ ಕಡೆಗೆ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅಮೆರಿಕ ಆರೋಪಿಸಿದೆ.

ಇರಾನ್​ನ ಈ ಕ್ರಮಗಳು, ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳ ಹಿತಾಸಕ್ತಿಗಳಿಗೆ ಬೆದರಿಕೆ ಒಡ್ಡುತ್ತಿವೆ ಎಂದು ಶ್ವೇತಭವನ ಹೇಳಿದೆ. ಇದನ್ನು ಮಟ್ಟಹಾಕಲು ನಿರಂತರ ಮತ್ತು ತೀವ್ರವಾದ ಪ್ರತಿಕ್ರಿಯೆಯ ಅಗತ್ಯ ಇದೆ ಎಂದು ಯುಎಸ್​ ಪ್ರತಿಪಾದಿಸಿದೆ.

Leave a Reply

Your email address will not be published. Required fields are marked *

error: Content is protected !!