ಉದಯವಾಹಿನಿ, ಇಸ್ಲಾಮಾಬಾದ್: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನ ತರ್ಲೈ ಪ್ರದೇಶದ ಇಮಾಮ್‌ಬರ್ಗಾ ಕಸ್ರ್-ಎ-ಖದೀಜತುಲ್ ಕುಬ್ರಾದಲ್ಲಿ ಪ್ರಾರ್ಥನೆ ನಡೆಯುತ್ತಿರುವಾಗ ಸ್ಫೋಟ ಸಂಭವಿಸಿ ಕನಿಷ್ಠ 10 ಜನರು ಸಾವನ್ನಪ್ಪಿದ್ದು, 20 ಕ್ಕೂ ಅಧಿಕ ಜನರಿಗೆ ಗಂಭೀರ ಗಾಯಗಳಾಗಿವೆ. ಪಾಕಿಸ್ತಾನಿ ಮಾಧ್ಯಮ ವರದಿಗಳ ಪ್ರಕಾರ, ಮಧ್ಯಾಹ್ನದ ಸಮಯದಲ್ಲಿ ಶಿಯಾ ಪ್ರಾರ್ಥನಾ ಸ್ಥಳದ ಮುಖ್ಯ ದ್ವಾರದಲ್ಲಿ ಆತ್ಮಾಹುತಿ ಬಾಂಬರ್ ಸ್ಫೋಟಕಗಳನ್ನು ಸ್ಫೋಟಿಸಲಾಗಿದೆ. ಗಾಯಾಳುಗಳನ್ನು ಪಾಕಿಸ್ತಾನ ವೈದ್ಯಕೀಯ ವಿಜ್ಞಾನ ಸಂಸ್ಥೆ (PIMS) ಮತ್ತು ಪಾಲಿಕ್ಲಿನಿಕ್ ಸೇರಿದಂತೆ ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಯಿತು.
ಸ್ಫೋಟದ ನಂತರ, ಇಸ್ಲಾಮಾಬಾದ್ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ನಗರಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿದರು. ರಕ್ಷಣಾ ಮತ್ತು ಕಾನೂನು ಜಾರಿ ತಂಡಗಳು ಸ್ಥಳಕ್ಕೆ ಧಾವಿಸಿದ್ದು ಸದ್ಯ ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ. ನವೆಂಬರ್ 11, 2025 ರಂದು ಇಸ್ಲಾಮಾಬಾದ್‌ನ ಜಿ -11 ಪ್ರದೇಶದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಕಟ್ಟಡದ ಹೊರಗೆ ಆತ್ಮಹತ್ಯಾ ಬಾಂಬ್ ಸ್ಫೋಟ ಸಂಭವಿಸಿದ ಮೂರು ತಿಂಗಳೊಳಗೆ ಈ ಘಟನೆ ನಡೆದಿದೆ. ಈ ಸ್ಫೋಟದಲ್ಲಿ ಹನ್ನೆರಡು ಜನರು ಸಾವನ್ನಪ್ಪಿದರು ಮತ್ತು 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಸದ್ಯ ಘಟನೆಯ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದು, ಹತ್ತಿರದ ಕಟ್ಟಡಗಳ ಕಿಟಕಿಗಳು ಒಡೆದುಹೋಗಿವೆ ಮತ್ತು ರಸ್ತೆಯುದ್ದಕ್ಕೂ ಭಗ್ನಾವಶೇಷಗಳು ಹರಡಿಕೊಂಡಿವೆ. ವಿಡಿಯೋದಲ್ಲಿ ಮೃತ ದೇಹಗಳಿ ಛಿದ್ರಗೊಂಡಿರುವುದನ್ನು ತೋರಿಸಲಾಗಿದೆ. ಕಳೆದ ನವೆಂಬರ್‌ನಲ್ಲಿ ಇಸ್ಲಾಮಾಬಾದ್‌ನ ಜಿಲ್ಲಾ ನ್ಯಾಯಾಲಯದ ಹೊರಭಾಗದಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ಭಾರೀ ತೀವ್ರತೆಯ ಕಾರ್ ಬಾಂಬ್ ಸ್ಫೋಟದಲ್ಲಿ ಕನಿಷ್ಠ 12 ಮಂದಿ ಮೃತಪಟ್ಟಿದ್ದರು. ನ್ಯಾಯಾಲಯದ ಹೊರಗೆ ನಿಲ್ಲಿಸಿದ್ದ ಹಲವಾರು ವಾಹನಗಳಿಗೆ ಹಾನಿ ಉಂಟಾಗಿತ್ತು.
