ಉದಯವಾಹಿನಿ, ಮುಂಬೈ(ಮಹಾರಾಷ್ಟ್ರ): ಎಲ್ಲರನ್ನೂ ವಿಶ್ವಾಸಕ್ಕೆ ಪಡೆದುಕೊಂಡು ಏಕರೂಪ ನಾಗರಿಕ ಸಂಹಿತೆ (ಯುಸಿಸಿ)ಯನ್ನು ರೂಪಿಸಬೇಕು. ಇದು ಯಾವುದೇ ವಿಭಜನೆಗಳಿಗೆ ಕಾರಣವಾಗಬಾರದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.
ಭಾನುವಾರ ನಡೆದ ಆರ್‌ಎಸ್‌ಎಸ್‌ನ ಶತಮಾನೋತ್ಸವ ಕಾರ್ಯಕ್ರಮವೊಂದರಲ್ಲಿ ನಡೆದ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಯುಸಿಸಿ ಕುರಿತಾಗಿ ಉತ್ತರಾಖಂಡದಲ್ಲಿ ಮೂರು ಲಕ್ಷ ಸಲಹೆಗಳನ್ನು ಪಡೆಯಲಾಗಿತ್ತು. ಸಂಬಂಧಪಟ್ಟ ಎಲ್ಲರೊಂದಿಗೆ ಚರ್ಚಿಸಿದ ನಂತರವೇ ಕಾಯ್ದೆಯನ್ನು ಅಲ್ಲಿ ಅಂಗೀಕರಿಸಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಇನ್ನೊಂದು ಪ್ರಶ್ನೆಗೆ, ನಮ್ಮಲ್ಲಿ ಬಹುಮತ ಅಥವಾ ಅಲ್ಪಸಂಖ್ಯಾತ (ಸಮುದಾಯ) ಅಂತ ಇಲ್ಲ. ನಾವೆಲ್ಲರೂ ಒಂದೇ ಸಮಾಜದವರು ಎಂದು ಪ್ರತಿಪಾದಿಸಿದರು. ಅಷ್ಟೇ ಅಲ್ಲದೇ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಗಳೊಂದಿಗೆ ಪರಸ್ಪರ ನಂಬಿಕೆ, ಸ್ನೇಹ ಮತ್ತು ಸಂವಾದದ ಅಗತ್ಯತೆಯನ್ನು ಭಾಗವತ್ ಒತ್ತಿ ಹೇಳಿದರು.
ಇಸ್ಲಾಂ ಧರ್ಮವನ್ನು ಶಾಂತಿಯ ಧರ್ಮ ಎಂದು ಕರೆಯಲಾಗುತ್ತದೆ. ಆದರೆ ಶಾಂತಿ ಕಾಣುವುದಿಲ್ಲ. ಧರ್ಮದಲ್ಲಿ ಆಧ್ಯಾತ್ಮಿಕತೆ ಇಲ್ಲದಿದ್ದರೆ, ಅದು ಪ್ರಾಬಲ್ಯ ಮತ್ತು ಆಕ್ರಮಣಕಾರಿಯಾಗುತ್ತದೆ. ಇಂದು ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮದಲ್ಲಿ ಕಾಣುತ್ತಿರುವುದು ಯೇಸುಕ್ರಿಸ್ತರು ಮತ್ತು ಪ್ರವಾದಿ ಮುಹಮ್ಮದರ ಬೋಧನೆಗಳ ಪ್ರಕಾರವಲ್ಲ. ನಮಗೆ ನಿಜವಾದ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮದ ಆಚರಣೆಗಳು ಬೇಕಿವೆ ಎಂದರು.
ಆರ್‌ಎಸ್‌ಎಸ್‌ಗೆ ಅಚ್ಛೇ ದಿನ್ ಬಂದಿದೆಯೇ?: ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಆರ್‌ಎಸ್‌ಎಸ್‌ಗೆ ಒಳ್ಳೆಯ ದಿನಗಳು ಬಂದಿದೆಯೇ ಎಂಬ ಪ್ರಶ್ನೆಗೆ, ನಮಗೆ ಒಳ್ಳೆಯ ದಿನಗಳು ಬಿಜೆಪಿಯಿಂದಾಗಿ ಬಂದಿಲ್ಲ. ನಾವು ರಾಮಮಂದಿರ ನಿರ್ಮಾಣಕ್ಕೆ ಬದ್ಧರಾಗಿದ್ದೆವು. ನಮ್ಮನ್ನು ಬೆಂಬಲಿಸಿದವರಿಗೆ ಲಾಭವಾಯಿತು. ಸ್ವಯಂಸೇವಕರ ಕಠಿಣ ಪರಿಶ್ರಮ ಮತ್ತು ಸೈದ್ಧಾಂತಿಕ ನೀತಿಗಳ ಬದ್ಧತೆಯಿಂದ ಆರ್‌ಎಸ್‌ಎಸ್‌ಗೆ ಅಚ್ಛೇ ದಿನ್ ಬಂದಿದೆ ಎಂದು ಒತ್ತಿ ಹೇಳಿದರು.

ಹಿಂದುತ್ವ ಸಿದ್ಧಾಂತವಾದಿ ವಿ.ಡಿ.ಸಾವರ್ಕರ್ ಅವರಿಗೆ ಭಾರತ ರತ್ನ ನೀಡಬೇಕೆಂಬ ಬಹುದಿನಗಳ ಬೇಡಿಕೆಯ ಕುರಿತು ಪ್ರತಿಕ್ರಿಯಿಸುತ್ತಾ, ಅವರಿಗೆ ಪ್ರಶಸ್ತಿ ನೀಡಿದರೆ ಪ್ರಶಸ್ತಿಯ ಘನತೆ ಹೆಚ್ಚಾಗುತ್ತದೆ ಎಂದು ತಿಳಿಸಿದರು.

 

Leave a Reply

Your email address will not be published. Required fields are marked *

error: Content is protected !!