ಉದಯವಾಹಿನಿ, ಅಮರಾವತಿ(ಆಂಧ್ರ ಪ್ರದೇಶ): ತಿರುಮಲದ ಲಡ್ಡುವಿನಲ್ಲಿ ಕಲಬೆರಕೆ ನಡೆದ ವರದಿಗಳ ನಂತರ ವಿವಾದ ಭುಗಿಲೆದ್ದಿದೆ. ಲಡ್ಡು ತಯಾರಿಕೆಯಲ್ಲಿ ಹಲವು ರಾಸಾಯನಿಕಗಳನ್ನು ಬಳಸಲಾಗಿದೆ ಎಂದು ಕೇಂದ್ರ ತನಿಖಾ ದಳ (ಸಿಬಿಐ) ತಿಳಿಸಿದ್ದು, ವಿವಾದ ಆಂಧ್ರದ ವೈಎಸ್ಆರ್ ಕಾಂಗ್ರೆಸ್ ಪಕ್ಷವನ್ನು ಇದೀಗ ಮತ್ತೆ ಇನ್ನಿಲ್ಲದಂತೆ ಕಾಡುತ್ತಿದೆ.
ಆಘಾತಕಾರಿ ವಿಷಯ ಬಹಿರಂಗವಾದ ನಡುವೆ, ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿಯ ಮಾಜಿ ಅಧ್ಯಕ್ಷ ವೈ.ವಿ.ಸುಬ್ಬಾ ರೆಡ್ಡಿ ಅವರು ತಿರುಮಲ ಲಡ್ಡು ತಯಾರಿಸಲು ಬಳಸುವ ತುಪ್ಪದಲ್ಲಿ ಕಲಬೆರಕೆ ನಡೆದಿರುವುದನ್ನು ಒಪ್ಪಿಕೊಂಡಿದ್ದಾರೆ.ಆಂಧ್ರದ ಮಾಜಿ ಸಿಎಂ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರ ಆಪ್ತ ಸಂಬಂಧಿಯೂ ಆಗಿರುವ ಸುಬ್ಬಾ ರೆಡ್ಡಿ, ಲಡ್ಡು ಮಾದರಿಗಳಲ್ಲಿ ರಾಸಾಯನಿಕಗಳು ಮತ್ತು ಇತರ ಪದಾರ್ಥಗಳಿವೆ ಎಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ಸಲ್ಲಿಸಿದ ವರದಿಯನ್ನು ತಾವು ಒಪ್ಪುವುದಾಗಿ ಸಾರ್ವಜನಿಕವಾಗಿಯೇ ಹೇಳಿದ್ದಾರೆ. ಆದರೆ ಈ ಕೃತ್ಯದಲ್ಲಿ ತಮ್ಮ ಪಾಲ್ಗೊಳ್ಳುವಿಕೆಯನ್ನು ಅವರು ನಿರಾಕರಿಸಿದ್ದು, ಅಂತರ ಕಾಯ್ದುಕೊಂಡಿದ್ದಾರೆ.
ತುಪ್ಪದಲ್ಲಿ ಕಲಬೆರಕೆ ಆಗಿತ್ತು. ಎಸ್‌ಐಟಿ ವರದಿ ತುಪ್ಪವನ್ನು ತಾಳೆ ಎಣ್ಣೆ, ತಾಳೆ ಕರ್ನಲ್ ಎಣ್ಣೆ ಮತ್ತು ಇತರ ಕೆಲವು ವಸ್ತುಗಳೊಂದಿಗೆ ಕಲಬೆರಕೆ ಮಾಡಲಾಗಿದೆ ಎಂದು ಹೇಳಿದೆ. ಅನೇಕ ಜನರು, ಕೆಲವು ಅಧಿಕಾರಿಗಳು ಮತ್ತು ಮೂರನೇ ವ್ಯಕ್ತಿಗಳು (ಹೊರಗಿನವರು) ಕಲಬೆರಕೆ ತುಪ್ಪದ ಪೂರೈಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ವರದಿ ತಿಳಿಸಿದೆ. ಅವರ ಹೆಸರುಗಳನ್ನು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ದೆಹಲಿ ಮೂಲದ ಸುದ್ದಿ ವಾಹಿನಿಯೊಂದಕ್ಕೆ ಅವರು ತಿಳಿಸಿದ್ದಾರೆ.
