ಉದಯವಾಹಿನಿ, ರಾಯ್ಪುರ್: ಶಾಲಾ ಜೀವನಕ್ಕೆ ಗುಡ್ ಬೈ ಹೇಳುವ ಸಮಯದಲ್ಲಿ, ತಮ್ಮ ತರಗತಿಯ ದಿನಗಳನ್ನು ನೆನೆದು ವಿದ್ಯಾರ್ಥಿಗಳು ಕಣ್ಣೀರಾಗುತ್ತಾರೆ. ಶಾಲಾ ದಿನಗಳಲ್ಲಿ ತಾವೇನು ಮಾಡಿದೆವು, ಶಿಕ್ಷಕರ ಪ್ರೋತ್ಸಾಹ, ಸಹಪಾಠಿಗಳ ಸಹಕಾರ ಇತ್ಯಾದಿಗಳ ಬಗ್ಗೆ ಒಂದೆರಡು ಒಳ್ಳೆಯ ಮಾತುಗಳನ್ನಾಡುತ್ತಾರೆ. ಛತ್ತೀಸ್‍ಗಢದ ಬಿಲಾಸ್‌ಪುರ ಮತ್ತು ಬಲೋದಬಜಾರ್‌ನಲ್ಲಿ ಮಾತ್ರ ವಿಚಿತ್ರ ಘಟನೆ ನಡೆದಿದೆ. 12ನೇ ತರಗತಿಯ ವಿದ್ಯಾರ್ಥಿಗಳು ಹೂವುಗಳು, ಅಪ್ಪುಗೆಗಳೊಂದಿಗೆ ವಿದಾಯ ಹೇಳುವ ಬದಲಾಗಿ ಟ್ರ್ಯಾಕ್ಟರ್‌ಗಳು, ವ್ಯಾನ್‌ಗಳು ಮತ್ತು ಕಾರುಗಳಲ್ಲಿ ಆಗಮಿಸಿ, ಅಪಾಯಕಾರಿ ಸಾಹಸಗಳನ್ನು ಪ್ರದರ್ಶಿಸಿದರು.
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಈ ವಿಡಿಯೊದಲ್ಲಿ, ವಿದ್ಯಾರ್ಥಿಗಳು ಕಿಟಕಿಗಳಿಂದ ಅರ್ಧ ಹೊರಗೆ ತೂಗಾಡುತ್ತಿರುವುದನ್ನು, ಬಾನೆಟ್‌ಗಳ ಮೇಲೆ ಕುಳಿತು ಯಾವುದೇ ಸುರಕ್ಷತಾ ಮುನ್ನೆಚ್ಚರಿಕೆಗಳಿಲ್ಲದೆ ಟ್ರ್ಯಾಕ್ಟರ್‌ಗಳನ್ನು ಓಡಿಸುತ್ತಿರುವುದನ್ನು ಸೆರೆಹಿಡಿಯಲಾಗಿದೆ. ವಿದ್ಯಾರ್ಥಿಯೊಬ್ಬ, ಟ್ರ್ಯಾಕ್ಟರ್ ಅನ್ನು ವೇಗವಾಗಿ ಚಲಾಯಿಸಿ ಹಿಮ್ಮುಖಗೊಳಿಸುವ ಮೂಲಕ ಧೂಳು ಹಬ್ಬಿದೆ. ನಂತರ ನಿಲ್ಲಿಸಿದ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ.
