ಉದಯವಾಹಿನಿ, ಮುಂಬೈ: ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ನಡೆದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಉನ್ನತ ಕಮಾಂಡರ್ ಸೇರಿದಂತೆ ಏಳು ಮಾವೋವಾದಿಗಳು ಮೃತಪಟ್ಟಿದ್ದಾರೆ. ಕಾರ್ಯಾಚರಣೆಯಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿಯೂ ಹುತಾತ್ಮರಾಗಿದ್ದಾರೆ.
ಮೂರು ದಿನಗಳ ಕಾಲ ನಡೆದ ಮಾವೋವಾದಿ ವಿರೋಧಿ ಕಾರ್ಯಾಚರಣೆಯ ಭಾಗವಾಗಿ ಈ ಎನ್‌ಕೌಂಟರ್‌ಗಳು ನಡೆದವು. ತೆಲಂಗಾಣ ಮೂಲದ ಪ್ರಭಾಕರ್ ಅಲಿಯಾಸ್ ಲೋಕೇತಿ ಚಂದರ್ ರಾವ್ ಅವರ ತಲೆಗೆ 25 ಲಕ್ಷ ರುಪಾಯಿ ಬಹುಮಾನವಿತ್ತು. ಗುಂಡಿನ ಚಕಮಕಿಯಲ್ಲಿ ಹತರಾದ ಮಾವೋವಾದಿಗಳಲ್ಲಿ ಇವನೂ ಒಬ್ಬ. ಪ್ರಭಾಕರ್ ಮಾವೋವಾದಿಗಳ ಗಡ್ಚಿರೋಲಿ ವಿಭಾಗ ಸಮಿತಿ, ಪಶ್ಚಿಮ ಉಪ-ವಲಯ ಬ್ಯೂರೋ ಮತ್ತು ಕಂಪನಿ ಸಂಖ್ಯೆ 10ರ ಉಸ್ತುವಾರಿ ವಹಿಸಿದ್ದ ಎಂದು ಗಡ್ಚಿರೋಲಿ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಛತ್ತೀಸ್‌ಗಢದಿಂದ ಬಂದ ಅಪರಿಚಿತ ಮಾವೋವಾದಿ ಸಂಘಟನೆಯ ಕಾರ್ಯಕರ್ತರ ಚಲನವಲಗಳ ಬಗ್ಗೆ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಫೆಬ್ರವರಿ 3ರ ರಾತ್ರಿ ಗಡ್ಚಿರೋಲಿ ಪೊಲೀಸರು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಜಂಟಿಯಾಗಿ ಮಾವೋವಾದಿ ವಿರೋಧಿ ಕಾರ್ಯಾಚರಣೆಯನ್ನು ನಡೆಸಿತು.
ನಂತರ ಗಡಚಿರೋಲಿ ಪೊಲೀಸರ ವಿಶೇಷ ನಕ್ಸಲ್ ವಿರೋಧಿ ಪಡೆ ಆಗಿರುವ ಸಿ-60ರ 14 ಘಟಕಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಯಿತು. ನಾರಾಯಣಪುರ–ಗಡಚಿರೋಲಿ ಗಡಿ ಪ್ರದೇಶದಲ್ಲಿ ಕಾರ್ಯಾಚರಣೆ ಆರಂಭಿಸಲಾಯಿತು.ಅತ್ಯಂತ ದೂರದ ಹಾಗೂ ಸವಾಲಿನ ಭೂಭಾಗವನ್ನು ಎದುರಿಸುತ್ತಾ, ಪೊಲೀಸ್ ತಂಡಗಳು ಬಹಳ ಧೈರ್ಯದಿಂದ ಅರಣ್ಯ ಪ್ರದೇಶವನ್ನು ಪ್ರವೇಶಿಸಿದ್ದವು. ಫೆಬ್ರವರಿ 4ರಂದು ಈ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯ ಸಮಯದಲ್ಲಿ, ಮಾವೋವಾದಿಗಳು ಪೊಲೀಸ್ ಸಿಬ್ಬಂದಿಯ ಮೇಲೆ ಮನಬಂದಂತೆ ಗುಂಡು ಹಾರಿಸಿದರು.
