ಉದಯವಾಹಿನಿ, ವಾಷಿಂಗ್ಟನ್‌: ಗಲ್ವಾನ್ ಘರ್ಷಣೆಯ ಒಂದು ವಾರದ ಬಳಿಕ ಚೀನಾ ರಹಸ್ಯವಾಗಿ ಅಣ್ವಸ್ತ್ರ ಪ್ರಯೋಗ ನಡೆಸಿದ್ದ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ. ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆಯ ನಿಶ್ಯಸ್ತ್ರೀಕರಣ ಸಮ್ಮೇಳನದಲ್ಲಿ ಅಮೆರಿಕದ ವಿದೇಶಾಂಗ ಇಲಾಖೆಯ ಅಧಿಕಾರಿ ಥಾಮಸ್ ಡಿನನ್ನೊ ಜಾಗತಿಕ ಏಜೆನ್ಸಿಗಳ ಪತ್ತೆಯನ್ನು ತಪ್ಪಿಸಲು ಚೀನಾ ರಹಸ್ಯ ಪರಮಾಣು ಪರೀಕ್ಷೆಗಳನ್ನು ನಡೆಸಿದೆ ಎಂದು ಆರೋಪಿಸುವ ಮೂಲಕ ಸಂಚಲನ ಮೂಡಿಸಿದ್ದಾರೆ.ಸಾಮಾನ್ಯವಾಗಿ ಭೂಮಿಯ ಅಡಿಯಲ್ಲಿ ಅಣು ಪರೀಕ್ಷೆ ನಡೆಸುವಾಗ ಕಂಪನ ಸಂಭವಿಸುತ್ತದೆ. ಆದರೆ ಚೀನಾ ಭೂಮಿಯಾಳದಲ್ಲಿ ಕಂಪನದ ಅನುಭವವವನ್ನು ತಗ್ಗಿಸಲು ಮತ್ತು ಜಗತ್ತಿನಿಂದ ಪರೀಕ್ಷೆ ಮರೆಮಾಚಲು ಚೀನಾ ಡಿಕೌಪ್ಲಿಂಗ್ ತಂತ್ರಜ್ಞಾನವನ್ನು ಬಳಸಿ ಪರೀಕ್ಷೆ ನಡೆಸಿದೆ.

2020ರ ಜೂನ್‌ 15-16 ರ ರಾತ್ರಿ ಭಾರತ ಮತ್ತು ಚೀನಿ ಸೈನಿಕರ ಮಧ್ಯೆ ಗಲ್ವಾನ್‌ನಲ್ಲಿ ಸಂಘರ್ಷ ನಡೆದಿತ್ತು. ಈ ಸಂಘರ್ಷದಲ್ಲಿ 20 ಭಾರತೀಯ ಸೈನಿಕರು ಮೃತಪಟ್ಟರೆ 30ಕ್ಕೂ ಹೆಚ್ಚು ಚೀನಿ ಸೈನಿಕರು ಮೃತಪಟ್ಟಿರುವ ಬಗ್ಗೆ ವರದಿಯಾಗಿತ್ತು. ಈ ಸಂಘರ್ಷ ನಡೆದ ಒಂದು ವಾರದ ಬಳಿಕ ಅಂದರೆ ಜೂನ್‌ 22 ರಂದು ಚೀನಾ ಪರಮಾಣು ಸ್ಫೋಟ ಪರೀಕ್ಷೆ ನಡೆಸಿತ್ತು.ಭಾರತದ ಗಡಿಯಲ್ಲಿರುವ ಷಿನ್‌ಜಿಯಾಂಗ್ ಪ್ರದೇಶದ ಲಾಪ್ ನೂರ್ ಸ್ಥಳದಲ್ಲಿ ಚೀನಾ ‘ಡಿಕೌಪ್ಲಿಂಗ್’ಎಂಬ ತಂತ್ರ ಬಳಸಿ ಪರಮಾಣು ಪರೀಕ್ಷೆ ನಡೆಸಿದೆ ಎಂದು ಅಮೆರಿಕ ದೂರಿದೆ. ಅಣು ಪರೀಕ್ಷೆ ನಡೆಸಿದ ಬೆನ್ನಲ್ಲೇ ಗಲ್ವಾನ್‌ ಘರ್ಷಣೆಯ ಚೀನಾದ ಉದ್ದೇಶಪೂರ್ವಕ ಕೃತ್ಯವೇ ಎಂಬ ಅನುಮಾನ ವ್ಯಕ್ತವಾಗಿದೆ. ಸಮಗ್ರ ಪರಮಾಣು ಪರೀಕ್ಷಾ ನಿಷೇಧ ಒಪ್ಪಂದದ ಅಡಿಯಲ್ಲಿ ಯಾವ ದೇಶವೂ ಅಣುಪರೀಕ್ಷೆ ನಡೆಸುವಂತಿಲ್ಲ. ಆದರೆ ಚೀನಾ ಗಡಿಯಲ್ಲಿ ಘರ್ಷಣೆ ನಡೆದರೆ ವಿಶ್ವದ ಕಣ್ಣು ಆ ವಿಚಾರದ ಬಗ್ಗೆ ಮಾತ್ರ ಇರುತ್ತದೆ. ಇನ್ನೊಂದು ಕಡೆ ರಹಸ್ಯವಾಗಿ ಪರೀಕ್ಷೆ ನಡೆಸಿದರೆ ಇದು ಯಾರಿಗೂ ತಿಳಿಯುವುದಿಲ್ಲ ಎಂಬ ಲೆಕ್ಕಾಚಾರ ಹಾಕಿಕೊಂಡು ಗಲ್ವಾನ್‌ ಘರ್ಷಣೆಗೆ ಚೀನಾ ಪ್ರಚೋದನೆ ನೀಡಿತ್ತಾ ಎಂಬ ಚರ್ಚೆ ಈಗ ಆರಂಭವಾಗಿದೆ.

Leave a Reply

Your email address will not be published. Required fields are marked *

error: Content is protected !!