ಉದಯವಾಹಿನಿ, ರಷ್ಯಾ: ಹಾಸ್ಟೆಲ್ ವಿದ್ಯಾರ್ಥಿಗಳ ಮೇಲೆ ಹದಿ ಹರೆಯದ ಯುವಕನೊಬ್ಬ ದಾಳಿ ನಡೆಸಿರುವ ಘಟನೆ ರಷ್ಯಾದಲ್ಲಿ ನಡೆದಿದೆ. ರಷ್ಯಾದ ಉಫಾದಲ್ಲಿರುವ ಸ್ಟೇಟ್ ಮೆಡಿಕಲ್ ಯೂನಿವರ್ಸಿಟಿಯ ವಸತಿ ನಿಲಯಕ್ಕೆ ನುಗ್ಗಿದ ಯುವಕ ಚಾಕುವಿನಿಂದ ಅಲ್ಲಿ ವಾಸಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ್ದಾನೆ. ಇವರಲ್ಲಿ ನಾಲ್ವರು ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ಶನಿವಾರ ನಡೆದಿರುವುದಾಗಿ ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ರಷ್ಯಾದ ಬಾಷ್ಕೋರ್ಟೊಸ್ತಾನ್ ಗಣರಾಜ್ಯದ ವಿಶ್ವವಿದ್ಯಾಲಯಕ್ಕೆ ಸೇರಿದ ವಿದೇಶಿ ವಿದ್ಯಾರ್ಥಿಗಳ ವಸತಿ ನಿಲಯದೊಳಗೆ ಶನಿವಾರ ಚಾಕು ಇರಿತದ ಘಟನೆ ನಡೆದಿದೆ. ದಾಳಿ ನಡೆಸಲು ಬಂದವನನ್ನು ತಡೆಯಲು ಯತ್ನಿಸಿದ ಇಬ್ಬರು ಪೊಲೀಸ್ ಅಧಿಕಾರಿಗಳು ಸಹ ಈ ಸಂದರ್ಭದಲ್ಲಿ ಗಾಯಗೊಂಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ರಷ್ಯಾದ ಆಂತರಿಕ ಸಚಿವಾಲಯ, ಬಾಷ್ಕೋರ್ಟೊಸ್ತಾನ್‌ನ ರಾಜಧಾನಿ ಉಫಾದಲ್ಲಿರುವ ಸ್ಟೇಟ್ ಮೆಡಿಕಲ್ ಯೂನಿವರ್ಸಿಟಿಯ ವಸತಿ ನಿಲಯಕ್ಕೆ ಚಾಕುವಿನೊಂದಿಗೆ ಬಂದ 15 ವರ್ಷದ ಬಾಲಕ ಅಲ್ಲಿ ವಾಸಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದನು. ಬಾಲಕನನ್ನು ಬಂಧಿಸಲು ಬಂದ ಇಬ್ಬರು ಪೊಲೀಸ್ ಅಧಿಕಾರಿಗಳಿಗೂ ಆತ ಇರಿದಿದ್ದಾನೆ. ಅಲ್ಲದೇ ತನ್ನ ಮೇಲೆಯೇ ತಾನು ದೈಹಿಕವಾಗಿ ಹಲ್ಲೆಯನ್ನು ಕೂಡ ನಡೆಸಿದ್ದಾನೆ ಎಂದು ಹೇಳಿದೆ. ಆಂತರಿಕ ಸಚಿವಾಲಯದ ವಕ್ತಾರೆ ಮೇಜರ್ ಜನರಲ್ ಐರಿನಾ ವೋಲ್ಕ್ ಅವರು ಶಂಕಿತನನ್ನು ಬಂಧಿಸಲಾಗಿದೆ. ಈ ಘಟನೆಯಲ್ಲಿ ಎಷ್ಟು ಮಂದಿಗೆ ಗಾಯವಾಗಿದೆ ಎನ್ನುವ ಕುರಿತು ಸ್ಪಷ್ಟ ಮಾಹಿತಿ ಇಲ್ಲ. ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು.
ಘಟನೆಯ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ ಪೊಲೀಸ್ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ ಕರೆದೊಯ್ಯುತ್ತಿರುವುದನ್ನು ಕಾಣಬಹುದು.
