ಉದಯವಾಹಿನಿ, ಯುಎಸ್ಎ: ಜಾರ್ಜಿಯಾದ ಅಟ್ಲಾಂಟದಲ್ಲಿರುವ ‘ನೃಪತುಂಗ ಕನ್ನಡ ಕೂಟ’ದ ವತಿಯಿಂದ ಮಕರ ಸಂಕ್ರಾತಿ ‘ಸುಗ್ಗಿ ಸಂಭ್ರಮ’ ಕಾರ್ಯಕ್ರಮ ಫೆ.7ರಂದು ನಡೆಯಿತು. 625 ಜೇಮ್ಸ್ ರೋಡ್ ನಲ್ಲಿರುವ ಡೆಸನ ಮಿಡ್ಜ್ ಸ್ಕೂಲ್ ನಲ್ಲಿ ಜರುಗಿದ ಸಮಾರಂಭಕ್ಕೆ ಆಗಮಿಸಿದ ಕನ್ನಡಿಗರನ್ನು ನೃಪತುಂಗ ಕನ್ನಡ ಕೂಟದ ಸದಸ್ಯರು ಎಳ್ಳು ಬೆಲ್ಲ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು. ಕೇರಂ, ರಂಗೋಲಿ ಬಿಡಿಸುವ, ಗಾಳಿಪಟ ಹಾರಿಸುವ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಅಂತ್ಯಾಕ್ಷರಿ ಹಾಗೂ ಕೋಲಾಟ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಭಾಗವಹಿಸಿ ಆನಂದಿಸಿದರು.
ಸ್ಥಳೀಯ ಕನ್ನಡಿಗ ಪ್ರಕಾಶ್ ರಾಮಚಂದ್ರ ಗೌಡ ತಮ್ಮ ಸುಮಧುರ ಕಂಠದಿಂದ ಹಲವಾರು ಕನ್ನಡ ಗೀತೆಗಳನ್ನು ಹಾಡಿ ಗಮನಸೆಳೆದರು.
ಸಂಜೆ ಪ್ರಮುಖ ಆಕರ್ಷಣೆಯಾಗಿ ಕುಂದಾಪುರ ಮೂಲದ ವಿಶ್ವೇಶ ಭಟ್ ಅವರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಜಾನಪದ, ಶಾಸ್ತ್ರೀಯ, ಸಿನೆಮಾ ಹಾಗೂ ಸುಗಮ ಸಂಗೀತದ ಹೊಸ ಮಿಶ್ರಣವನ್ನು ಸಭಿಕರಿಗೆ ನೀಡಿ ರಂಜಿಸಿದರು. ವಿಶ್ವೇಶ ಭಟ್ ರೊಂದಿಗೆ ಸ್ಥಳೀಯ ಪ್ರತಿಭೆಗಳಾದ ಜ್ಯೋತ್ಸಾರಾವ್ ಹಾಗೂ ಶ್ರೀಪ್ರಿಯ ಶ್ರೀನಿವಾಸ್ ಸಹ ಅದ್ಭುತವಾಗಿ ಹಾಡಿದರು.
ಭಾಗವಹಿಸಿದ ಕಲಾವಿದರನ್ನು ಕೋಕಾ ಕೋಲಾ ಕಂಪೆನಿಯ ಗ್ಲೋಬಲ್ ಮಾರ್ಕೆಟಿಂಗ್ ಟೆಕ್ನಾಲಜಿಯ ಉಪಾಧ್ಯಕ್ಷ ಶೇಖರ್ ಗೌಡ ಸನ್ಮಾನಿಸಿದರು.
ಮನೋರಂಜನೆ ಕಾರ್ಯಕ್ರಮಗಳನ್ನು ನೃಪತುಂಗ ಕನ್ನಡ ಕೂಟದ ಉಪಾಧ್ಯಕ್ಷ ಭರತ್ ತೇಜಸ್ವಿ ನಿರ್ವಹಿಸಿದರು. ಕೂಟದ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
