ಉದಯವಾಹಿನಿ,: ಮೊಸರು ಯಾರಿಗಿಷ್ಟವಿಲ್ಲ? ಅದರಲ್ಲೂ ಚಾಕುವಿನಲ್ಲಿ ಕತ್ತರಿಸಿ ಹಾಕುವಷ್ಟು ಗಟ್ಟಿ ಮೊಸರಿದ್ದರೆ, ಜೊತೆಗೆ ಅನ್ನವೋ ರೊಟ್ಟಿಯೊ ನಾಲ್ಕು ತುತ್ತು ಹೆಚ್ಚೇ ಹೋಗುತ್ತದೆ ಒಳಗೆ. ಸಿಹಿ ಮೊಸರು, ಕೆನೆ ಮೊಸರು, ಗಟ್ಟಿ ಮೊಸರು, ಕಡೆದ ಮಜ್ಜಿಗೆ, ಮಸಾಲೆ ಮಜ್ಜಿಗೆ… ಇಂಥವನ್ನು ಇಷ್ಟಪಡುವವರ ಸಂಖ್ಯೆಯನ್ನು ಲೆಕ್ಕ ಇಡಲಾಗದು. ಆದರೆ ಚಳಿಗಾಲದಲ್ಲಿ ಮೊಸರು ತಿನ್ನಬಹುದೇ?
ಈ ಪ್ರಶ್ನೆ ಹಿಂದಿನಿಂದಲೂ ಜನರನ್ನು ಕಾಡಿದ್ದಿದೆ. ಚಳಿಗಾಲದಲ್ಲಿ ಮೊಸರು ತಿಂದರೆ ಶೀತ, ಕೆಮ್ಮು, ಕಫದಂಥ ಸಮಸ್ಯೆಗಳು ಗಂಟಿಕ್ಕಿ ಕೊಳ್ಳುತ್ತವೆ ಎಂಬುದು ಹಲವರ ವಾದ, ಕೆಲವರ ಅನುಭವ. ಆಯುರ್ವೇದದಲ್ಲೂ ಚಳಿಗಾಲದಲ್ಲಿ, ಅದರಲ್ಲೂ ರಾತ್ರಿಯ ಹೊತ್ತು ಮೊಸರು ಸೇವನೆಯನ್ನು ಒಪ್ಪುವುದಿಲ್ಲ. ಹಾಗಾದರೆ ಚಳಿಗಾಲದಲ್ಲಿ ಮೊಸರು ತಿನ್ನಬೇಕೆ ಅಥವಾ ಬೇಡವೇ? ತಿಂದರೇನಾಗುತ್ತದೆ? ತಿನ್ನದಿದ್ದರೆ ಆಗುವ ತೊಂದರೆಯೇನು?
ಚಳಿಗಾಲದಲ್ಲಿ ಕಾಡುವ ಶೀತ-ಕೆಮ್ಮು-ಕಫದಂಥ ಸಮಸ್ಯೆಗಳು ನಿಮಗಿಲ್ಲ ಎಂದಾದರೆ, ಯಾವುದೇ ಕಾಲದಲ್ಲೂ ಮೊಸರು-ಮಜ್ಜಿಗೆ ಸೇವಿಸುವುದಕ್ಕೆ ತೊಂದರೆಯಿಲ್ಲ ಎನ್ನುತ್ತಾರೆ ಆಹಾರ ತಜ್ಞರು. ಪ್ರೊಬಯಾಟಿಕ್ ಅಂಶವನ್ನು ಸಾಂದ್ರವಾಗಿ ಹೊಂದಿರುವ ಮೊಸರು-ಮಜ್ಜಿಗೆ ನಮ್ಮ ಆರೋಗ್ಯಕ್ಕೆ ಬೇಕು. ಜೊತೆಗೆ, ಕ್ಯಾಲ್ಶಿಯಂ, ಫಾಸ್ಫರಸ್, ಪೊಟಾಶಿಯಂ, ವಿಟಮಿನ್ ಬಿ12 ಮತ್ತಿತರ ಅಗತ್ಯ ಪೋಷಕಾಂಶಗಳನ್ನು ಹೊಂದಿರುವ ಇದನ್ನು ಹಲವು ಬಗೆಗಳಲ್ಲಿ ಸೇವಿಸಲು ಸಾಧ್ಯವಿದೆ. ಅಂದರೆ ನಮ್ಮ ಆರೋಗ್ಯಕ್ಕೆ ಸೂಕ್ತ ಎನಿಸುವ ರೀತಿಯಲ್ಲಿ ಇದರ ಸೇವನೆಗೆ ಅವಕಾಶವಿದೆ.
ಲಾಭಗಳೇನು?: ಮೊಸರು ಎಂದಾಕ್ಷಣ ಅದನ್ನು ತಣ್ಣಗೇ ತಿನ್ನಬೇಕೆಂಬ ನಿಯಮವಿಲ್ಲ. ಬೆಚ್ಚಗೆ ಮಾಡಿ ಅಥವಾ ಬಿಸಿಯಾದ ಅಡುಗೆಗಳ ಮೂಲಕ ತಿನ್ನುವವರೂ ಇದ್ದಾರೆ. ಎಲ್ಲಕ್ಕಿಂತ ಮುಖ್ಯ ವಾದ ಲಾಭವೆಂದರೆ ನಮ್ಮ ಜೀರ್ಣಾಂಗಗಳ ಆರೋಗ್ಯ ಕಾಪಿಡುವಂಥ ಪ್ರೊಬಯಾಟಿಕ್ ಕಿಣ್ವಗಳು ಇದರಲ್ಲಿ ಹೇರಳವಾಗಿ ಇರುವುದು. ಇದರಿಂದ ಚಳಿಗಾಲದಲ್ಲೂ ಹೊಟ್ಟೆಯುರಿ, ಆಸಿಡಿಟಿ, ಹುಳಿತೇಗು, ಅಜೀರ್ಣ ಮುಂತಾದ ತೊಂದರೆಗಳಿಲ್ಲದಂತೆ ನೆಮ್ಮದಿಯಾಗಿರಬಹುದು.
ಪೋಷಕಸತ್ವಗಳು: ಕ್ಯಾಲ್ಶಿಯಂ, ವಿಟಮಿನ್ ಬಿ೧೨, ಪ್ರೊಟೀನ್ ಮತ್ತಿತರ ಮಹತ್ವದ ಪೋಷಕಾಂಶಗಳನ್ನು ಮೊಸರು ಹೊಂದಿದೆ. ಇದರಿಂದ ಮೂಳೆಗಳು ಗಟ್ಟಿಯಾಗಿ, ಸ್ನಾಯುಗಳು ಆರೋಗ್ಯ ಪೂರ್ಣವಾಗಿ, ಜೀರ್ಣಾಂಗಗಳ ಕ್ಷಮತೆ ಹೆಚ್ಚಿ, ದೇಹದ ಒಟ್ಟಾರೆ ಸ್ವಾಸ್ಥ್ಯ ಹೆಚ್ಚುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಸೋಂಕುಗಳು ಹೆಚ್ಚುವ ದಿನವಾದ್ದರಿಂದ, ರೋಗ ನಿರೋಧಕ ಶಕ್ತಿ ಮತ್ತು ದೇಹಾರೋಗ್ಯ ವರ್ಧನೆಗೆ ಇದು ನೆರವಾಗುತ್ತದೆ.
