ಉದಯವಾಹಿನಿ, ಶಿವಮೊಗ್ಗ : ಮಹಿಳೆಯೊಬ್ಬರು ಹಿಂದೂ ಧರ್ಮ ತೊರೆದು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದು, ಬಳಿಕ ಪತಿ ಹಾಗೂ ಮಕ್ಕಳನ್ನೂ ಸಹ ಮತಾಂತರಗೊಳ್ಳಲು ಕಿರುಕುಳ ನೀಡಿರುವ ಘಟನೆ ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ. ಈ ಸಂಬಂಧ ಭದ್ರಾವತಿಯ ಬೊಮ್ಮನಕಟ್ಟೆ ನಿವಾಸಿ ಬಿ. ವಿನಯ್ ಎಂಬುವವರು ಪತ್ನಿ ಪ್ರಿಯತಾ ಆರ್. ವಿರುದ್ಧ ಪೇಪರ್ ಟೌನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ನನ್ನ ಪತ್ನಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ. ಈಗ ನಾನು ಮತ್ತು ನನ್ನ ಇಬ್ಬರು ಹೆಣ್ಣು ಮಕ್ಕಳನ್ನೂ ಮತಾಂತರಗೊಳ್ಳುವಂತೆ ಒತ್ತಾಯಿಸಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾಳೆ ಎಂದು ಪತಿ ವಿನಯ್ ಆರೋಪಿಸಿದ್ದಾರೆ.ವಿನಯ್ 2011ರಲ್ಲಿ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಳೇಬೀಡು ಬನಶಂಕರಿ ಕಲ್ಯಾಣ ಮಂಟಪದಲ್ಲಿ ಪ್ರಿಯತಾ ಆರ್. ಅವರನ್ನು ಹಿಂದೂ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದರೆ, ಪತ್ನಿ ಮತಾಂತರಗೊಂಡ ಬಳಿ ಇವರ ಸಂಸಾರದಲ್ಲಿ ಬಿರುಕು ಮೂಡಿದೆ.
