ಉದಯವಾಹಿನಿ, ಹುಬ್ಬಳ್ಳಿ : ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ ʼಅಂತಾರಾಷ್ಟ್ರೀಯ ಗಾಳಿಪಟ ಉತ್ಸವʼ ಮತ್ತು ಸಂಸದರ ಕ್ರೀಡಾ ಮಹೋತ್ಸವವು ಭಾನುವಾರ ಸಂಗೀತ ರಸದೌತಣ, ಸಹಸ್ರಾರು ಪ್ರೇಕ್ಷಕರ ಕರತಾಡನ ಸಂಭ್ರಮದೊಂದಿಗೆ ಅದ್ದೂರಿ ತೆರೆ ಕಂಡಿತು. ಕನ್ನಡ ಚಿತ್ರರಂಗದ ಖ್ಯಾತ ಗಾಯಕ ನಕುಲ್ ಅಭ್ಯಂಕರ್, ಖ್ಯಾತ ಬಹುಭಾಷಾ ಗಾಯಕ ಸೋನು ನಿಗಮ್ ಅವರ ಸುಮಧುರ ಕಂಠಸಿರಿಯ ಲಹರಿ ನೆರೆದಿದ್ದ ಸಂಗೀತಾಭಿಮಾನಿಗಳನ್ನು ಖುಷಿಯಲ್ಲಿ ಕುಣಿಸಿತು.

ಜೀ ಕನ್ನಡ `ಸರಿಗಮಪ’ ಖ್ಯಾತಿಯ ಪಂಜಾಬ್ ಮೂಲದ ಗಾಯಕ ಜಸ್ಕರನ್ ಸಿಂಗ್, ಪ್ರಸಿದ್ದ ಗಾಯಕಿ ದಿವ್ಯಾ ರಾಮಚಂದ್ರ ತಂಡ ಹರಿಸಿದ ಸಂಗೀತ ಸುಧೆ ಪ್ರೇಕ್ಷಕರಿಗೆ ಸಂಗೀತ ರಸದೌತಣ ಉಣಬಡಿಸಿತು. “ಕಾಣದಂತೆ ಮಾಯವಾದನೋ… ನಮ್ಮ ಶಿವ…ಕೈಲಾಸ ಸೇರಿಕೊಂಡನೋ” ಹಾಡಿಗೆ ಕಂಠ ನೀಡಿದ ಸ್ವತಃ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರೂ ತುಸು ಹೊತ್ತು ಗಾಯಕರಾಗಿ ಪ್ರೇಕ್ಷಕರನ್ನು ರಂಜಿಸಿದರು.‌

“ಏಳೇಳು ಬೆಟ್ಟ ಹತ್ಕೊಂಡು ಬಂದ.. ಗಿಲ್ಲಕ್ಕೋ.. ಶಿವ ಗಿಲ್ಲಕ್ಕೋ…”, ‘ಆಕಾಶ ಇಷ್ಟೇ ಯಾಕಿದೆಯೋ….ಈ ಭೂಮಿ ಕಷ್ಟ ಆಗಿದೆಯೋ…ಹಂಚೋಣ ಈ ಪ್ರೀತಿ, ಬೇಕಿಲ್ಲ ರಸೀತಿ… ಗಾಳಿಪಟ… ಗಾಳಿಪಟ…” ಹೀಗೆ ಮನಸಿಗೆ ಮುದ ನೀಡುವ ಹಾಡುಗಳಿಗೆ ಸಚಿವ ಜೋಶಿ ಅವರಿಂದಲೂ ಕಂಠ ಸೇರಿಸಿ ಗಾಯಕರು ರಂಜಿಸಿದರು.

ಹುಬ್ಬಳ್ಳಿಯ ಆಕ್ಸ್‌ಫರ್ಡ್ ಕಾಲೇಜ್ ಬಳಿಯ ಮೈದಾನದಲ್ಲಿ ಎರಡೂ ದಿನ ಗಾಳಿಪಟ ಉತ್ಸವ ಮತ್ತು ಕ್ರೀಡಾ ಮಹೋತ್ಸವದ ಕಲರವ ಸ್ಮಾರ್ಟ್ ಸಿಟಿಗೆ ಹೊಸ ಮೆರುಗು ತಂದಿತು. ನೆರೆ ರಾಷ್ಟ್ರ, ನೆರೆ ರಾಜ್ಯ ಹಾಗೂ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಗಾಳಿಪಟ ಸ್ಪರ್ಧಿಗಳು ಬಾನಂಗಳದಲ್ಲಿ ಹಾರಾಡಿಸಿದ ಬಣ್ಣ ಬಣ್ಣದ ಗಾಳಿಪಟಗಳು ಉತ್ತರ ಕರ್ನಾಟಕ ಮಂದಿಯ ಮನಸೆಳೆದವು.

Leave a Reply

Your email address will not be published. Required fields are marked *

error: Content is protected !!