ಉದಯವಾಹಿನಿ, ನವದೆಹಲಿ: ಸಂಸತ್ ಆವರಣದಲ್ಲಿ ಕಾಂಗ್ರೆಸ್ ಸಂಸದರು ಪ್ರಧಾನಿ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಪೋಸ್ಟರ್ ಹೊತ್ತೊಯ್ದಿರುವುದು ಪ್ರಚೋದನಕಾರಿ ನೀತಿ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಕಿಡಿ ಕಾರಿದ್ದಾರೆ.ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಗೆ ಆಗಮಿಸುವ ಮೊದಲು ಸಂಸತ್ತಿನಲ್ಲಿ ನಡೆದ ಘಟನೆ ತೀವ್ರ ಆಘಾತಕಾರಿ ಎಂದು ಜೋಶಿ ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರಧಾನ ಮಂತ್ರಿ ಪೀಠದವರೆಗೂ, ಗದ್ದಲದ ನಡುವೆಯೂ ವಿರೋಧ ಪಕ್ಷದ ಸಂಸದರು ಎಲ್ಲಾ ಮಿತಿಗಳನ್ನು ದಾಟಿದ್ದಾರೆ. ಇವರದ್ದು ಚರ್ಚೆ ಆಗಿರಲಿಲ್ಲ. ಪ್ರತಿಭಟನೆಯೂ ಆಗಿರಲಿಲ್ಲ. ಇದು ಕೇವಲ ಉದ್ದೇಶಪೂರ್ವಕವಾದಂತಹ ಪ್ರಚೋದನೆಯಾಗಿತ್ತು ಎಂದು ಜೋಶಿ ಆರೋಪಿಸಿದ್ದಾರೆ. ಒಬ್ಬ ಸಂಸದರಾಗಿ ಸದನದ ಘನತೆ ಕಾಪಾಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ. ಆದರೆ, ಕಾಂಗ್ರೆಸ್ ಸಂಸದರ ನಡೆ ತೀವ್ರ ವಿರೋಧಾಭಾಸವಾಗಿದೆ ಎಂದು ಆಕ್ಷೇಪಿಸಿದ್ದಾರೆ.

ಸಂಸತ್ತಿನ ಆವರಣದೊಳಗೆ ಗೌರವಾನ್ವಿತ ಪ್ರಧಾನಿಯವರ ವಿರುದ್ಧ ಆಕ್ಷೇಪಾರ್ಹ ಪೋಸ್ಟರ್‌ಗಳನ್ನು ಹೊತ್ತೊಯ್ಯುವುದು ರಾಹುಲ್‌ ಗಾಂಧಿ ಮತ್ತು ಕಾಂಗ್ರೆಸ್ ಅದೆಷ್ಟು ಕೆಳಮಟ್ಟಕ್ಕೆ ಇಳಿಯುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.ರಾಜ್ಯದ ಖಜಾನೆ ಖಾಲಿ ಮಾಡಿದವರು ಮೊದಲು ತಮ್ಮನ್ನೇ ಪ್ರಶ್ನಿಸಿಕೊಳ್ಳಲಿ. ಭಾರತ-ಅಮೆರಿಕ ವಾಣಿಜ್ಯ ಒಪ್ಪಂದ ಟೀಕಿಸುವ ಮೊದಲು ಸಿಎಂ ಸಿದ್ದರಾಮಯ್ಯ ಅವರು, ಆರ್ಥಿಕ ಸಂಪದ್ಭರಿತವಾಗಿದ್ದ ರಾಜ್ಯದ ಖಜಾನೆ ಖಾಲಿ ಮಾಡಿರುವ ಬಗ್ಗೆ ತಮ್ಮನ್ನೊಮ್ಮೆ ಪ್ರಶ್ನೆ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.

ಆರ್ಥಿಕ ಸಂಪತ್ತಿನಿಂದ ಕೂಡಿದ್ದ ಕರ್ನಾಟಕದ ಖಜಾನೆಯನ್ನು ಕಾಂಗ್ರೆಸ್ ಸರ್ಕಾರ ಇಂದು ಖಾಲಿ ಮಾಡಿದ್ದಲ್ಲದೆ, ಸಂಪೂರ್ಣ ಅಭಿವೃದ್ಧಿಯನ್ನು ಸ್ಥಗಿತಗೊಳಿಸಿದೆ. ಹೂಡಿಕೆದಾರರ ವಿಶ್ವಾಸವನ್ನು ಸಹ ಕಳೆದುಕೊಂಡಿದೆ. ಇದೆಲ್ಲಾ ಏಕೆ? ಎಂಬುದನ್ನು ಸಿಎಂ ಉತ್ತರಿಸಲಿ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷ ಮೊದಲು ‘ಭಾರತದ ಹಿತಾಸಕ್ತಿ’ ಕುರಿತು ಉಪನ್ಯಾಸ ನೀಡುವುದೊಳಿತು. 2008ರಲ್ಲಿ 26/11ರ ನಂತರ ಮುಂಬೈ ಹೊತ್ತಿ ಉರಿಯುತ್ತಿದ್ದರೂ ಕಾಂಗ್ರೆಸ್ ಮೌನವಹಿಸಿತು. ಹಿರಿಯ ಕಾಂಗ್ರೆಸ್ ನಾಯಕರು ಹಾಗೂ ಮಾಜಿ ಗೃಹ ಸಚಿವರು ಬಾಹ್ಯ ರಾಜತಾಂತ್ರಿಕ ಒತ್ತಡಕ್ಕೆ ಮಣಿದ ಪರಿಣಾಮ ಭಾರತ ನಿರ್ಣಾಯಕ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾಗಿತ್ತು ಎಂಬುದನ್ನು ಜೋಶಿ ಸಿಎಂಗೆ ನೆನಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!