ಉದಯವಾಹಿನಿ, ಬೆಂಗಳೂರು: ಬಜೆಟ್ ಪೂರ್ವಸಿದ್ಧತಾ ಸಭೆಗೆ ಗೈರಾಗಿರುವ ಡಿಕೆಶಿಗೆ ನಯವಾಗಿಯೇ ಟಕ್ಕರ್ ಕೊಟ್ಟ ಸಿಎಂ ಸಿದ್ದರಾಮಯ್ಯ ಡಿಸಿಎಂ ಅವರು ಲೆಟರ್ ಬರೆದಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಸಭೆ ನಡೆಯಲಿದೆ ಎನ್ನುವ ಮೂಲಕ ಮುಯ್ಯಿಗೆ ಮುಯ್ಯಿ ಎಂಬ ಸಂದೇಶ ರವಾನಿಸಿದ್ದಾರೆ.
ವಿಧಾನಸೌಧದ ಪಶ್ಚಿಮ ದಿಕ್ಕಿನಲ್ಲಿರುವ ಮಾಜಿ ಮುಖ್ಯಮಂತ್ರಿ ದಿವಂಗತ ಕೆಂಗಲ್ ಹನುಮಂತಯ್ಯನವರ ಜನ್ಮ ದಿನಾಚರಣೆ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಡಿಕೆಶಿ ನನಗೆ ಲೆಟರ್ ಬರೆದಿದ್ದಾರೆ, ಅನುಮತಿ ಪಡೆದಿದ್ದಾರೆ. ಅಸ್ಸಾಂ ಚುನಾವಣೆ ಸಂಬಂಧ ದೆಹಲಿಗೆ ಹೋಗುತ್ತಿರುವುದಾಗಿ ಪತ್ರ ಬರೆದಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಬಜೆಟ್ ಪೂರ್ವಸಿದ್ಧತಾ ಸಭೆ ನಡೆಯುತ್ತೆ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ನಾವು ಸಿದ್ದರಾಮಯ್ಯ ಮಾತಾಡಿಕೊಂಡಿದ್ದೇವೆ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಪರೋಕ್ಷವಾಗಿ ಟಾಂಗ್ ಕೊಟ್ಟ ಸಿಎಂ ಸಿಡಿಮಿಡಿಗೊಂಡು, ಡಿಕೆಶಿ ಹತ್ರನೇ ಕೇಳಿ, ಹೈಕಮಾಂಡ್ ತೀರ್ಮಾನ ಅಂತಿಮ. ಹೈಕಮಾಂಡ್ ಹೇಳಿದ್ದೇ ಅಂತಿಮ ತೀರ್ಮಾನ. ಪದೇ ಪದೇ ಯಾಕೆ ಕೇಳ್ತೀರಾ? ಡಿಕೆಶಿ ಹೇಳಿದ್ರೆ ಅವರನ್ನ ಕೇಳಿ. ನಾನು ದೆಹಲಿಗೆ ಹೋಗಲ್ಲ. ಕರೆಯದಿದ್ದರೆ ಯಾಕೆ ಹೋಗಲಿ, ಕರೆದ್ರೆ ಹೋಗ್ತೀನಿ ಎಂದು ತಿಳಿಸಿದ್ದಾರೆ.

ಇದೇ ವೇಳೆ ಮಾಜಿ ಮುಖ್ಯಮಂತ್ರಿ ದಿವಂಗತ ಕೆಂಗಲ್ ಹನುಮಂತಯ್ಯನವರ ಬಗ್ಗೆ ಮಾತನಾಡಿ, ಒಬ್ಬ ಪ್ರಾಮಾಣಿಕ ಹಾಗೂ ಧೀಮಂತ ರಾಜಕಾರಣಿ. ಸುಂದರವಾದ ಭವ್ಯವಾದ ವಿಧಾನಸೌಧ ನಿರ್ಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದ ನಾಯಕರಾಗಿ, ಕೇಂದ್ರದ ರೈಲ್ವೆ ಮಂತ್ರಿಯಾಗಿ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸಂವಿಧಾನ ರಚನಾ ಸಮಿತಿಗೆ ಅಮೂಲ್ಯ ಸಲಹೆಗಳನ್ನು ನೀಡಿ, ರಾಷ್ಟ್ರ ನಿರ್ಮಾಣದಲ್ಲಿ ಅಮೂಲ್ಯ ಕೊಡುಗೆಯನ್ನು ನೀಡಿದಂತಹ ಧೀಮಂತ ರಾಜಕಾರಣಿಯೊಬ್ಬರು ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!