ಉದಯವಾಹಿನಿ, ಶೋಪಿಯಾನ್ (ಜಮ್ಮು-ಕಾಶ್ಮೀರ): ಉಗ್ರ ಸಂಘಟನೆಗಳ ಜೊತೆ ನಂಟು, ಅಕ್ರಮ ಹಣ ವರ್ಗಾವಣೆ, ನೆಲದ ಕಾನೂನುಗಳ ದುರುಪಯೋಗ ಆರೋಪದಡಿ ಕೇಂದ್ರಾಡಳಿತ ಪ್ರದೇಶದಲ್ಲಿ ಮತ್ತೊಂದು ಇಸ್ಲಾಮಿಕ್​ ಸಂಘಟನೆಯನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ನಿಷೇಧಿಸಲಾಗಿದೆ.
ಕಾಶ್ಮೀರದ ಸೇಬು ಪಟ್ಟಣ ಎಂದೇ ಕರೆಯುವ ಶೋಪಿಯಾನ್​ ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿದ್ದ ಜಾಮಿಯಾ ಸಿರಾಜುಲ್​ ಉಲೂಮ್​ ಎಂಬ ಇಸ್ಲಾಮಿಕ್ ಸಂಘಟನೆಯನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಕಾನೂನುಬಾಹಿರ ಸಂಸ್ಥೆ ಎಂದು ಘೋಷಿಸಿದೆ.
ಯುಎಪಿಎ ಸೆಕ್ಷನ್ 8(1) ರ ಅಡಿಯಲ್ಲಿ ಸಂಸ್ಥೆಯನ್ನು ನಿಷೇಧಿಸಿ ವಿಭಾಗೀಯ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಅಧಿಕೃತ ಆದೇಶದಲ್ಲಿ ಸೂಚಿಸಿದಂತೆ, ಶೋಪಿಯಾನ್​​ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗಳು ಮಾರ್ಚ್ 24 ರಂದು ಸಲ್ಲಿಸಿದ್ದ ವಿವರವಾದ ವರದಿಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದೆ.

ದಾಖಲೆಗಳು ಮತ್ತು ಲಭ್ಯವಾದ ಮಾಹಿತಿಯ ಪ್ರಕಾರ, ಧಾರ್ಮಿಕ ಶಿಕ್ಷಣ ಸಂಸ್ಥೆಯಾಗಿರುವ ಜಾಮಿಯಾ ಸಿರಾಜುಲ್​ ಉಲೂಮ್ ಉಗ್ರ ಸಂಘಟನೆಗಳ ಜೊತೆ ನಂಟು ಹೊಂದಿದೆ. ಆರ್ಥಿಕ ಅಪರಾಧ, ಭೂ ಅಕ್ರಮ ನಡೆಸಿದ ಬಗ್ಗೆ ಸಾಕ್ಷ್ಯಾಧಾರಗಳಿವೆ. ನಿಷೇಧಿತ ಸಂಘಟನೆಯಾದ ಜಮಾತ್-ಎ-ಇಸ್ಲಾಮಿ (ಜೆಇ) ಯೊಂದಿಗೆ ಸಂಸ್ಥೆಯು ನಿರಂತರ ಮತ್ತು ರಹಸ್ಯ ಸಂಪರ್ಕ ಹೊಂದಿದೆ. ಈ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳು ಸಂಸ್ಥೆಯ ಆಡಳಿತ ಮತ್ತು ಬೋಧನಾ ಸ್ಥಳಗಳ ಮೇಲೆ ನಿಯಂತ್ರಣ ಸಾಧಿಸಿದ್ದಾರೆ ಎಂದು ಆದೇಶದಲ್ಲಿ ನಮೂದಿಸಲಾಗಿದೆ. ಸಂಸ್ಥೆಯು ಹಲವಾರು ಆರ್ಥಿಕ ಅಪರಾಧ ಎಸಗಿರುವ ಬಗ್ಗೆ ಸಾಕ್ಷ್ಯಾಧಾರಗಳು ಲಭ್ಯವಾಗಿವೆ. ಆತಂಕಕಾರಿ ವಿಚಾರವೆಂದರೆ, ಸಂಸ್ಥೆಯಲ್ಲಿ ಉಗ್ರವಾದವನ್ನು ಉತ್ತೇಜಿಸುವ ವಾತಾವರಣವಿದೆ. ಕೆಲವು ಮಾಜಿ ವಿದ್ಯಾರ್ಥಿಗಳು ಉಗ್ರಗಾಮಿ ಚಟುವಟಿಕೆಗಳಲ್ಲಿ ಮತ್ತು ರಾಷ್ಟ್ರೀಯ ಭದ್ರತೆಯ ವಿರುದ್ಧದ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪವಿದೆ” ಎಂದು ಹಿರಿಯ ಪೊಲೀಸ್​ ಅಧಿಕಾರಿ ನೀಡಿದ ವರದಿಯಲ್ಲಿದೆ.

Leave a Reply

Your email address will not be published. Required fields are marked *

error: Content is protected !!