ಉದಯವಾಹಿನಿ, ಗ್ವಾಲಿಯರ್ (ಮಧ್ಯಪ್ರದೇಶ): ದಾಬ್ರಾದಲ್ಲಿರುವ ನವಗ್ರಹ ಶಕ್ತಿಪೀಠ ದೇವಾಲಯದ ಭವ್ಯ ಪವಿತ್ರೀಕರಣ ಸಮಾರಂಭದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದು, 8 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರಲ್ಲಿ ಒಬ್ಬರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದ್ದು, ಅವರನ್ನು ಗ್ವಾಲಿಯರ್ನ ಜಯಾರೋಗ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ದೇಗುಲದ ಪವಿತ್ರೀಕರಣ ಸಮಾರಂಭದ ಮೊದಲ ದಿನದ ಕಳಸ ಯಾತ್ರೆಯ ವೇಳೆ ಜನ ದಟ್ಟಣೆ ಹೆಚ್ಚಾಗಿದ್ದು, ಈ ವೇಳೆ ಅನೇಕರು ಕಾಲ್ತುಳಿತಕ್ಕೆ ಒಳಗಾಗಿದ್ದಾರೆ. ಮಹಿಳೆ ಮೇಲೆ ಹೆಚ್ಚಿನ ಜನರು ಬಿದ್ದಿದ್ದರಿಂದ ಗೊಂದಲ ಉಂಟಾಗಿ ಕಾಲ್ತುಳಿತ ಸಂಭವಿಸಿದೆ. ಈ ಸಂದರ್ಭದಲ್ಲಿ ಆದ ಗಲಿಬಿಲಿಯಿಂದ ಅನೇಕ ಜನರು ತುಳಿತಕ್ಕೆ ಒಳಗಾದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸ್ಥಳದಲ್ಲೇ ಅಸುನೀಗಿದ ಮಹಿಳೆ; ಸಾವನ್ನಪ್ಪಿದ ಮಹಿಳೆಯನ್ನು ರತಿ ಸಾಹು ಎಂದು ಗುರುತಿಸಲಾಗಿದ್ದು, ಅವರು ಸ್ಥಳದಲ್ಲೇ ಅಸುನೀಗಿದರು. ಇನ್ನುಳಿದ 8 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ನಾಲ್ವರು ಸಹ ಮಹಿಳೆಯರಾಗಿದ್ದಾರೆ. ಇದರಲ್ಲಿ ನಾಲ್ಕು ವರ್ಷದ ಮಗುವು ಸಹ ಗಾಯಗೊಂಡಿದೆ ಎಂದು ವರದಿಯಾಗಿದೆ. ಮೂವರನ್ನು ಗ್ವಾಲಿಯರ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಯನ್ನು ಮುಂದುವರೆಸಲಾಗಿದೆ. ಗಾಯಗೊಂಡಿರುವ ಮಗುವಿನ ಗುರುತು ಪತ್ತೆಯಾಗಿಲ್ಲ. ಮಗು ಪ್ರಜ್ಞಾಹೀನವಾಗಿದ್ದು, ಅವರ ಕುಟುಂಬ ಸದಸ್ಯರ ಹುಡುಕಾಟ ಸಾಗಿದೆ ಎಂದು ದಾಬ್ರಾ ಉಪ ವಲಯದ ಪೊಲೀಸ್ ಅಧಿಕಾರಿ ಸೌರಭ್ ಕುಮಾರ್ ಮಾಹಿತಿ ನೀಡಿದ್ದಾರೆ.
ಘಟನೆ ಬಗ್ಗೆ ಆಸ್ಪತ್ರೆ ವೈದ್ಯರು ಹೇಳಿದ್ದೇನು?: ಘಟನೆ ಕುರಿತು ಮಾತನಾಡಿರುವ ಆಸ್ಪತ್ರೆ ವೈದ್ಯರಾದ ಡಾ ಸುಧೀರ್ ಸಕ್ಸೆನಾ, ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರ ಸ್ಥಿತಿಯಲ್ಲಿರುವವರ ಆರೋಗ್ಯದ ಮೇಲೆ ತೀವ್ರ ನಿಗಾ ಇಡಲಾಗಿದೆ. ಮೇಲ್ವಿಚಾರಣೆ ನಡೆಯುತ್ತಿದೆ ಎಂದು ಹೇಳಿದರು.
ಸೂಕ್ತ ನಿರ್ವಹಣೆ ಕೊರತೆಯಿಂದಾಗಿ ಈ ಕಾಲ್ತುಳಿತ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನೆಯ ವರದಿ ಬೆನ್ನಲ್ಲೇ ಪೊಲೀಸರು ಮತ್ತು ಜಿಲ್ಲಾ ಆಡಳಿತಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ಸದ್ಯ ಪರಿಸ್ಥಿತಿ ಶಾಂತವಾಗಿದ್ದು, ಸೂಕ್ತ ವ್ಯವಸ್ಥೆಗಳನ್ನು ಮಾಡುತ್ತಿದ್ದು, ಯಾತ್ರೆ ಸಾಂಗವಾಗಿ ನಡೆಯಲು ಬೇಕಾದ ಕ್ರಮಗಳನ್ನು ತುರ್ತಾಗಿ ತೆಗೆದುಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ದಾಬ್ರಾದಲ್ಲಿರುವ ನವಗ್ರಹ ಶಕ್ತಿಪೀಠ ದೇವಾಲಯವನ್ನು ಮಾಜಿ ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ ನಿರ್ಮಿಸಿದ್ದರು.
