ಉದಯವಾಹಿನಿ, ಮಥುರಾ (ಉತ್ತರ ಪ್ರದೇಶ): ಇಲ್ಲಿನ ಖಪ್ಪರ್‌ಪುರ ಗ್ರಾಮದಲ್ಲಿ ಇಂದು ಬೆಳಗ್ಗೆ ಒಂದೇ ಕುಟುಂಬದ ಐವರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ತಮ್ಮ ಸಾವಿಗೂ ಮೊದಲು ಮೊಬೈಲ್ನಲ್ಲಿ ವಿಡಿಯೋ ಮಾಡಿದ್ದಾರೆ. ಮನೆ ಗೋಡೆಯ ಮೇಲೆ ಕಿರು ಟಿಪ್ಪಣಿ ಬರೆದಿರುವುದು ಪತ್ತೆಯಾಗಿದೆ.
ಐವರಲ್ಲಿ ದಂಪತಿ, ಇಬ್ಬರು ಹೆಣ್ಣು ಮಕ್ಕಳು ಮತ್ತು ಓರ್ವ ಪುತ್ರ ಇದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಪೊಲೀಸ್ ಅಧಿಕಾರಿಗಳು ಮತ್ತು ಇತರ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಶವಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ವಿಡಿಯೋ ಮಾಡಿಟ್ಟು ಆತ್ಮಹತ್ಯೆ: 35 ವರ್ಷದ ಮನೀಶ್, ಅವರ ಪತ್ನಿ ವರ್ಷಿಯಾ (30), ಎರಡೂವರೆ ವರ್ಷದ ಪುತ್ರ ಪಂಕಜ್, ಪುತ್ರಿಯರಾದ ಪ್ರಿಯಾಂಶಿ (4) ಮತ್ತು ಹನಿ (5) ಸಾವಿಗೀಡಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತಮ್ಮ ಮೊಬೈಲ್ನಲ್ಲಿ ಇಡೀ ಘಟನೆಯನ್ನು ಚಿತ್ರೀಕರಿಸಿದ್ದಾರೆ. ಇದನ್ನೇ ಆತ್ಮಹತ್ಯಾ ಪತ್ರ ಮತ್ತು ವಿಡಿಯೋ ಎಂದು ಪೊಲೀಸರು ಪೊಲೀಸರು ಪರಿಗಣಿಸಿ ಪ್ರಕರಣದ ತನಿಖೆ ಆರಂಭಿಸಿದ್ದಾರೆ.
ಹಾಲಿನಲ್ಲಿ ವಿಷ ಬೆರೆಸಿ ಕುಡಿದು ಸಾವು?: ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ, ಸೋಮವಾರ ಸಂಜೆ ಮನೀಶ್ ಅವರು ಹಾಲು ತಂದಿದ್ದಾರೆ. ಬಳಿಕ ಅದಕ್ಕೆ ವಿಷ ಬೆರೆಸಿ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಸಾಮೂಹಿಕ ಆತ್ಮಹತ್ಯೆ ಬಗ್ಗೆ ಹೇಳಿಕೆ ನೀಡಿರುವ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಿ.ಪಿ. ಸಿಂಗ್, “ಖಪ್ಪರ್‌ಪುರ ಗ್ರಾಮದಲ್ಲಿ ದುರಂತ ಘಟನೆ ಸಂಭವಿಸಿದೆ. ಮನೀಶ್ ಕುಮಾರ್ ಅವರ ಕುಟುಂಬದ ಐವರು ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೊಬೈಲ್ ಫೋನ್‌ನಲ್ಲಿ ಆತ್ಮಹತ್ಯೆ ಪತ್ರ ಮತ್ತು ವಿಡಿಯೋ ಸಿಕ್ಕಿದೆ” ಎಂದು ಹೇಳಿದರು.
ಗೋಡೆ ಮೇಲೆ ಸಾವಿನ ಬರಹ: ಇತ್ತೀಚೆಗೆ ಕುಟುಂಬವು 12 ಲಕ್ಷ ರೂಪಾಯಿಗೆ ಒಂದು ಜಮೀನನ್ನು ಮಾರಾಟ ಮಾಡಿದ್ದರು. ಗ್ರಾಮದಲ್ಲಿ ಇನ್ನಷ್ಟು ಕೃಷಿ ಭೂಮಿಯನ್ನು ಹೊಂದಿದ್ದಾರೆ. ಆದರೆ ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ. ಸಾವಿನ ಕಾರಣದ ಕುರಿತು ತನಿಖೆ ನಡೆಯುತ್ತಿದೆ. ಗೋಡೆಯ ಮೇಲೆ ಆತ್ಮಹತ್ಯೆ ಟಿಪ್ಪಣಿಯನ್ನೂ ಬರೆಯಲಾಗಿದೆ. ವಿಧಿವಿಜ್ಞಾನ ತನಿಖಾ ತಂಡವು ಸ್ಥಳದಲ್ಲಿ ಪುರಾವೆಗಳನ್ನು ಸಂಗ್ರಹಿಸುತ್ತಿದೆ ಎಂದು ತಿಳಿಸಿದರು.
ಮನೀಶ್ ಅವರು ರೈತರಾಗಿದ್ದಾರೆ. ಈ ಕಠಿಣ ನಿರ್ಧಾರ ಕೈಗೊಳ್ಳುವ ಮೊದಲು ವಿಡಿಯೋ ಚಿತ್ರೀಕರಿಸಿದ್ದಾರೆ. ಅದರ ಪರಿಶೀಲನೆ ನಡೆಯುತ್ತಿದೆ. ಕುಟುಂಬದ ಸಾವಿನ ಬಗ್ಗೆ ಮೃತ ಮನೀಶ್ ಅವರ ಸಹೋದರ ಮಾಹಿತಿ ನೀಡಿದ್ದಾರೆ. ಬೆಳಗ್ಗೆ ಮನೀಶ್ ಅವರ ಮಕ್ಕಳು ಮನೆಯ ಹೊರಗೆ ಕಾಣದಿದ್ದಾಗ, ಕುಟುಂಬ ಸದಸ್ಯರು ಅನುಮಾನಗೊಂಡು ಬಾಗಿಲು ತಟ್ಟಿದಾಗ, ಒಳಗಿನಿಂದ ಲಾಕ್ ಆಗಿರುವುದು ಕಂಡುಬಂದಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.
