ಉದಯವಾಹಿನಿ, ಬಾಲಸೋರ್ (ಒಡಿಶಾ): ಆಧುನಿಕತೆ ಮತ್ತು ಪ್ಲಾಸ್ಟಿಕ್ ಅಬ್ಬರದಲ್ಲಿ ಸಾಕಷ್ಟು ಮೂಲ ಕಸಬುಗಳು ನಶಿಸಿ ಹೋಗುತ್ತಿವೆ ಎನ್ನುವ ಕೊರಗಿನ ಮಧ್ಯೆ ಒಡಿಶಾದ ಕುಟುಂಬವೊಂದು ಬಿದಿರಿನ ವಸ್ತುಗಳನ್ನು ತಯಾರಿಸಿ ಮೂಲ ಕಸಬಿಗೆ ಆಧುನಿಕ ಸ್ಪರ್ಶ ನೀಡಿ ಉಳಿದ ಮೂಲ ಕಸಬುದಾರರಿಗೆ ಮಾದರಿಯಾಗಿದೆ. ಬಾಲಸೋರ್ ಜಿಲ್ಲೆಯ ಸೋರ್ ಬ್ಲಾಕ್‌ನ ತುಂಡಪಾಡ ಪ್ರದೇಶದ ಸರೋಜಿನಿ ದಾಸ್ ಮಾದರಿಯಾದ ಮಹಿಳೆ.
ಇವರ ಕೈಚಳಕದಿಂದ ಅತ್ಯದ್ಭುತ ರೂಪ ಪಡೆದ ಕರಕುಶಲ ವಸ್ತುಗಳನ್ನು ಕಂಡಾಗ ಬಿದಿರಿಗೆ ಹೀಗೂ ಜೀವಂತಿಕೆ ನೀಡಹುದಲ್ಲಾ.. ಅದರಲ್ಲೂ ಬದುಕಿನ ಬುತ್ತಿ ಕಟ್ಟಿಕೊಳ್ಳಬಹುದಲ್ಲಾ ಎಂದೆನಿಸದೇ ಇರದು. ಈ ಬಿದಿರೇ ಇಂದು ಸರೋಜಿನಿ ದಾಸ್ ಅವರನ್ನು ಒಂದು ಉನ್ನತ ಸ್ಥಾನಕ್ಕೆ ತಂದು ನಿಲ್ಲಿಸಿದೆ. ಬಿದಿರು ಉದ್ಯಮದಿಂದ ಸ್ವಾವಲಂಬಿ ಬದುಕು ಕಟ್ಟಿಕೊಂಡಿರುವ ಸರೋಜಿನಿ ದಾಸ್, ಅನೇಕ ಮಹಿಳೆಯರಿಗೆ ಸ್ಫೂರ್ತಿ ಕೂಡ ಆಗಿದ್ದಾರೆ. ನೋಡಿದ್ದನ್ನು ಮೂಲ ರೂಪದಂತೆಯೇ ಕಲಾಕೃತಿ ಸಿದ್ಧಪಡಿಸುವ ಕೌಶಲ್ಯ ಹೊಂದಿರುವ ಸರೋಜಿನಿ ದಾಸ್, ಬಿದಿರಿನ ಬುಟ್ಟಿಯಿಂದ ಹಿಡಿದು ನೂರಾರು ಕರಕುಶಲವಸ್ತುಗಳನ್ನು ಸಿದ್ಧಪಡಿಸಿದ್ದು ಅವರ ಶ್ರಮಕ್ಕೆ ಸಾಕ್ಷಿ.ಬಿದಿರಿನ ಆಭರಣಗಳು, ಬಿದಿರಿನ ನವಿಲು, ಬಿದಿರಿನ ಪೆನ್ ಸ್ಟ್ಯಾಂಡ್, ಹೂವಿನ ಪುಷ್ಪಗುಚ್ಛ, ಸ್ಕೂಟರ್, ಹಡಗು, ಸೋಫಾ ಸೆಟ್, ಕುರ್ಚಿ, ವಾಲ್ ಕೀಚೈನ್, ಬಿಸಣಿಕೆ, ಟಿಪಾಯಿ, ಪೂಜಾ ಬುಟ್ಟಿ, ಪತ್ರೆಗಳಿಡುವ ಬುಟ್ಟಿ, ತರಕಾರಿ ಬುಟ್ಟಿ, ಹಣ್ಣಿನಬುಟ್ಟಿ, ಮರ, ಕಸದ ಬುಟ್ಟಿಗಳು, ಟೇಬಲ್, ಕುರ್ಚಿ, ಬರ್ಡ್ಸ್ ಬಾಕ್ಸ್… ಹೀಗೆ ಪಟ್ಟಿ ಮಾಡುತ್ತಿದ್ದರೆ, ಅದು ಬೆಳೆಯುತ್ತಲೇ ಇರುತ್ತದೆ.
ಮಹಿಳೆಯರಿಗೆ ಸ್ವಾವಲಂಬಿಗಳಾಗಲು ತರಬೇತಿ: ಎಲ್ಲರೂ ತಮ್ಮಂತೆ ಸ್ವಾವಲಂಬಿಯಾಗಿ ಬದುಕಲಿ ಎಂಬ ಆಸೆ ನನ್ನದು. ನಾನು ಕಲಿತ ಈ ಕರಕುಶಲವಸ್ತುಗಳ ಕಲೆ ನನಗೆ ಮಾತ್ರ ಸೀಮಿತವಾಗಬಾರದು ಎಂಬ ಕಾರಣದಿಂದ ಅನೇಕ ಮಹಿಳೆಯರಿಗೆ ಈ ಬಗ್ಗೆ ತರಬೇತಿ ನೀಡಿದ್ದೇನೆ. ಈಗಲೂ ತರಬೇತಿ ನೀಡುತ್ತಿರುವೆ. ಒಣಗಿದ ಬಿದಿರಿಗೆ ಹೊಸ ರೂಪ ನೀಡಿವುದು ನಮ್ಮ ಕೆಲಸ. ಇದು ನಮ್ಮ ಆತ್ಮ. ಈ ಕಲೆಗೆ ನಾನು ನನ್ನ ಜೀವವನ್ನೇ ಸಮರ್ಪಿಸಿದ್ದೇವೆ. ನನಗೀಗ 50 ವರ್ಷ. ಈ ಕರಕುಶಲತೆಗೆ ನನ್ನ ಜೀವವನ್ನೇ ಧಾರೆಯೆರೆಯುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಂಡಿರುವೆ. ಸಿಮುಲಿಯಾ ಬ್ಲಾಕ್ ಜಮುಝಾಡಿ ಪ್ರದೇಶದಲ್ಲಿ ತನ್ನದೇ ಆದ ಬಿದಿರು ಮತ್ತು ಬೆತ್ತದ ಕರಕುಶಲ ವಸ್ತುಗಳ ಘಟಕವನ್ನು ಸ್ಥಾಪಿಸಲಾಗಿದ್ದು, ಅಲ್ಲಿ ಸದ್ಯ 50ಕ್ಕೂ ಹೆಚ್ಚು ಮಹಿಳೆಯರಿಗೆ ತರಬೇತಿ ನೀಡುತ್ತಿರುವೆ. ನಾವೆಲ್ಲರೂ ಸೇರಿಕೊಂಡು ಬಿದಿರು ಮತ್ತು ಬೆತ್ತದಿಂದ 150ಕ್ಕೂ ಹೆಚ್ಚು ಬಗೆ ಬಗೆಯ ವಸ್ತುಗಳನ್ನು ತಯಾರಿಸುತ್ತೇವೆ. ಗೃಹಾಲಂಕಾರ ವಸ್ತುಗಳು, ಬಿದಿರಿನ ಗೃಹೋಪಯೋಗಿ ವಸ್ತುಗಳಿಂದ ಹಿಡಿದು ಬಿದಿರಿನ ಆಭರಣಗಳವರೆಗೆ ಎಲ್ಲವನ್ನೂ ಜಾತ್ರೆಗಳು, ಮೇಳಗಳು ಹಾಗೂ ಹಬ್ಬಗಳಲ್ಲಿ ಮಾರಾಟ ಮಾಡುತ್ತೇವೆ. ಅಲ್ಲದೇ ಗ್ರಾಹಕರ ಅಭಿರುಚಿಗೆ ತಕ್ಕಂತೆ, ಬೇಡಿಕೆಗೆ ಅನುಗುಣವಾಗಿ ಕಲಾಕೃತಿಗಳನ್ನು ಸಿದ್ಧಪಡಿಸಿಕೊಡುತ್ತೇವೆ ಎನ್ನುತ್ತಾರೆ ಸರೋಜಿನಿ ದಾಸ್ ತಮ್ಮ ಕಾಯಕದ ಕುರಿತು ಇಲ್ಲಿ ಹೇಳಿಕೊಂಡಿದ್ದಾರೆ.
