ಉದಯವಾಹಿನಿ, ಬಂಟ್ವಾಳ: ಹಳೆ ತಲೆಮಾರಿನ ಯಕ್ಷಗಾನ ಅರ್ಥಧಾರಿ, ಶಿಕ್ಷಕ ಮತ್ತು ಶಂಭೂರು ಗ್ರಾಮದ ಪಟೇಲ ದಿ.ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ಅವರ ಪುತ್ರ ಹವ್ಯಾಸಿ ಯಕ್ಷಗಾನ ಕಲಾವಿದ, ನಿವೃತ್ತ ಭೂಮಾಪನ ಅಧಿಕಾರಿ ದಿ.ಬೊಂಡಾಲ ರಾಮಣ್ಣ ಶೆಟ್ಟರ್ ಹೆಸರಿನಲ್ಲಿ ನೀಡಲಾಗುವ ‘ಬೊಂಡಾಲ ಪ್ರಶಸ್ತಿ’ಗೆ ಕಟೀಲು ಮೇಳದ ಹಿರಿಯ ವೇಷಧಾರಿ ಲಕ್ಷ್ಮಣ ಶೆಟ್ಟಿ ತಾರೆಮಾರ್ ಆಯ್ಕೆಯಾಗಿದ್ದಾರೆ.
ಫೆಬ್ರವರಿ 19ರಂದು ರಾತ್ರಿ ಬಂಟ್ವಾಳ ತಾಲೂಕು ಶಂಭೂರು ಗ್ರಾಮದ ಬೊಂಡಾಲದಲ್ಲಿ ಶ್ರೀ ದುರ್ಗಾಪರಮೇಶ್ವರಿ ಬಯಲಾಟ ಸೇವಾ ಸಮಿತಿ ಮತ್ತು ಹತ್ತು ಸಮಸ್ತರ ವತಿಯಿಂದ ‘ಕಲಿ ಕೀಚಕ’ ಹಾಗೂ ಮರುದಿನ ಬೊಂಡಾಲ ಚಾರಿಟಬಲ್ ಟ್ರಸ್ಟ್ ವತಿಯಿಂದ ‘ಶ್ರೀದೇವಿ ಮಹಾತ್ಮೆ’ ಸೇವಾ ಬಯಲಾಟಗಳು ಜರಗಲಿವೆ. ಫೆಬ್ರವರಿ 20 ರಂದು ಶುಕ್ರವಾರ ರಾತ್ರಿ ರಂಗಸ್ಥಳದಲ್ಲಿ ಜರಗುವ ‘ದಿ.ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ದಿ.ಬೊಂಡಾಲ ರಾಮಣ್ಣ ಶೆಟ್ಟಿ ಸಂಸ್ಮರಣಾ ಸಮಾರಂಭ’ದಲ್ಲಿ ಗಣ್ಯರ ಸಮ್ಮುಖ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಬೊಂಡಾಲ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಟೀಲು ಮೇಳದಲ್ಲಿ ಸೇವೆ ಸಲ್ಲಿಸಿದ ಕಲಾವಿದರಿಗಾಗಿಯೇ ಬೊಂಡಾಲ ಚಾರಿಟಬಲ್ ಟ್ರಸ್ಟ್ ವತಿಯಿಂದ ಉದ್ಯಮಿ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಅವರು ನೀಡುತ್ತಿರುವ ವಾರ್ಷಿಕ ಪ್ರಶಸ್ತಿಗೆ ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಭಾಸ್ಕರ ರೈ ಹಾಗೂ ಆಯ್ಕೆ ಸಮಿತಿ 2025-26ನೇ ಸಾಲಿಗೆ ಲಕ್ಷ್ಮಣಶೆಟ್ಟಿ ತಾರೆಮಾರ್ ಅವರ ಹೆಸರನ್ನು ಶಿಫಾರಸು ಮಾಡಿದೆ. ಈ ಪ್ರಶಸ್ತಿಯು ರೂ.10,000 ನಗದು, ಶಾಲು, ಸ್ಮರಣಿಕೆ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
