ಉದಯವಾಹಿನಿ, ರಾಯಚೂರು: ಕಲಿಯುಗದ ಕಾಮಧೇನು, ಭಕ್ತರ ಕಲ್ಪವೃಕ್ಷ ಎಂದೇ ಪ್ರಸಿದ್ಧಿ ಪಡೆದಿರುವ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಕಾಣಿಕೆ ಹುಂಡಿಗೆ ಭಕ್ತರಿಂದ ಕೋಟ್ಯಂತರ ರೂಪಾಯಿ ಹರಿದು ಬಂದಿದೆ.ರಾಯಚೂರು ಜಿಲ್ಲೆಯ ಗಡಿ ಭಾಗದ ತುಂಗಾತೀರದಲ್ಲಿ ನೆಲೆಸಿರುವ ಗುರು ಶ್ರೀರಾಘವೇಂದ್ರ ಸ್ವಾಮಿಗಳ ಮೂಲ ದರ್ಶನ ಪಡೆಯಲು ಭಕ್ತರು ದೇಶದ ಮೂಲೆಮೂಲೆಗಳಿಂದ ಪ್ರತಿನಿತ್ಯ ಆಗಮಿಸುತ್ತಾರೆ. ಹೀಗೆ ಬರುವ ಭಕ್ತರು ತಮ್ಮ ಕೈಯಿಂದಾಗುವ ಕಾಣಿಕೆಯನ್ನು ರಾಯರಿಗೆ ಸಮರ್ಪಿಸುತ್ತಾರೆ.
ಫೆ.10ರಂದು ಹುಂಡಿ ತೆರೆದು ಎಣಿಕೆ ಮಾಡಿದ್ದು, ಕಳೆದ 21 ದಿನಗಳಲ್ಲಿ 3,08,37,572 ಕೋಟಿ ರೂ. ಹಣದ ಜತೆಗೆ 13 ಗ್ರಾಂ ಬಂಗಾರ ಮತ್ತು 1018 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಇದರಲ್ಲಿ 2,98,13,571 ಕೋಟಿ ರೂ. ಮೌಲ್ಯದ ನೋಟುಗಳು, 10,24,000 ಲಕ್ಷ ರೂ. ಮೌಲ್ಯದ ನಾಣ್ಯಗಳನ್ನು ಭಕ್ತರು ಕಾಣಿಕೆ ಹುಂಡಿಗೆ ಸಲ್ಲಿಸಿದ್ದಾರೆ ಎಂದು ಶ್ರೀ ಮಠದ ವ್ಯವಸ್ಥಾಪಕ ಎಸ್.ಕೆ.ಶ್ರೀನಿವಾಸ್ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಯರಲ್ಲಿ ಭಕ್ತಿಯಿಂದ ಇಷ್ಟಾರ್ಥ ಬೇಡಿಕೊಂಡರೆ, ಅವುಗಳನ್ನು ನೆರವೇರಿಸುತ್ತಾರೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ಹೀಗಾಗಿ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಭಕ್ತರು ರಾಯರ ದರ್ಶನಕ್ಕೆ ಆಗಮಿಸುತ್ತಾರೆ. ಭಕ್ತರಲ್ಲಿ ಹಲವರು ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿಕೊಂಡು ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದುಕೊಳ್ಳುತ್ತಾರೆ. ಶ್ರೀ ಮಠದಿಂದ ಭಕ್ತರಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ.ಕಾಣಿಕೆ ಎಣಿಕೆ ಕಾರ್ಯದಲ್ಲಿ ಮಠದ ನೂರಾರು ಜನ ಸಿಬ್ಬಂದಿ, ಭಜನಾ ಮಂಡಳಿ ಸದಸ್ಯರು, ಕರಸೇವಕರು ಭಾಗವಹಿಸಿದ್ದರು.
ರಾಯರ ಮೂಲ ಬೃಂದಾವನ ದರ್ಶನಕ್ಕಾಗಿ ತೆಲಂಗಾಣ, ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ದೇಶದ ನಾನಾ ರಾಜ್ಯಗಳು ಮತ್ತು ವಿವಿಧ ದೇಶಗಳಿಂದ ಭಕ್ತರು ಆಗಮಿಸುತ್ತಿದ್ದು, ದಿನ ದಿನಕ್ಕೆ ಭಕ್ತರು ಬರುವಿಕೆ ಹೆಚ್ಚಳವಾಗಿದೆ.
