ಉದಯವಾಹಿನಿ, ಬೆಂಗಳೂರು: ವೀಸಾ ಅವಧಿ ಮುಗಿದರೂ ಅಕ್ರಮವಾಗಿ ವಾಸವಾಗಿದ್ದ ಮಹಿಳೆ ಸೇರಿ 8 ಮಂದಿ ವಿದೇಶಿ ಪ್ರಜೆಗಳನ್ನು ಸಂಜಯನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕ್ಯಾಮರೂನ್ನ ಐವರು ಹಾಗೂ ಸುಡಾನ್ನ ಮೂವರನ್ನು ವಶಕ್ಕೆ ಪಡೆಯಲಾಗಿದೆ.
ಸುಮಾರು ನಾಲ್ಕು ವರ್ಷಗಳ ಹಿಂದೆ ವಿದ್ಯಾರ್ಥಿ ವೀಸಾದಡಿ ಬೆಂಗಳೂರಿಗೆ ಬಂದಿದ್ದ ಈ ವಿದೇಶಿ ಪ್ರಜೆಗಳು, ವೀಸಾ ಅವಧಿ ಮುಕ್ತಾಯಗೊಂಡಿದ್ದರೂ ನಗರದಲ್ಲಿ ಅಕ್ರಮವಾಗಿ ವಾಸವಾಗಿದ್ದರು. ಈ ಹಿಂದೆ ನಗರದ ಗಡಿಭಾಗದಲ್ಲಿ ವಾಸವಾಗಿದ್ದ ಆರೋಪಿಗಳು, ಇತ್ತೀಚೆಗೆ ಸಂಜಯನಗರದ ಭೂಪಸಂದ್ರಕ್ಕೆ ಬಂದು ವಾಸವಾಗಿದ್ದರು.
ಕೆಲ ದಿನಗಳಿಂದ ನಡೆಯುತ್ತಿರುವ ಅಕ್ರಮ ವಾಸಿಗಳ ಬಗ್ಗೆ ನಗರದೆಲ್ಲೆಡೆ ವಿಶೇಷ ಕಾರ್ಯಾಚರಣೆ ನಡೆಯುತ್ತಿದೆ. ಈ ವೇಳೆ ಮಂಗಳವಾರದ ಕಾರ್ಯಾಚರಣೆ ವೇಳೆ ಎಂಟು ಮಂದಿ ಪತ್ತೆಯಾಗಿದ್ದು, ಎಲ್ಲರನ್ನೂ ಪ್ರಾದೇಶಿಕ ವಿದೇಶಿ ನೋಂದಣಿ ಕಚೇರಿಗೆ ಹಾಜರುಪಡಿಸಲಾಗುತ್ತದೆ. ಬಳಿಕ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ, ಅವರ ಮಾತೃ ದೇಶಕ್ಕೆ ವಾಪಸ್ ಕಳುಹಿಸಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
196 ಬಾಂಗ್ಲಾದೇಶಿಗರ ಗಡಿಪಾರು: ಇಡೀ ರಾಜ್ಯದಲ್ಲಿ ಕಾರ್ಯಾಚರಣೆ ನಡೆಸಿ ಅಕ್ರಮ ಬಾಂಗ್ಲಾದವರನ್ನು ಗುರುತಿಸಿ ಗಡಿಪಾರು ಮಾಡಲು ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಇತ್ತೀಚೆಗೆ ನಡೆದ ವಿಶೇಷ ಜಂಟಿ ಅಧಿವೇಶನದಲ್ಲಿ ತಿಳಿಸಿದ್ದರು.
ವಿಧಾನಸಭೆಯಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆಯ ಕುರಿತ ಪ್ರಶ್ನೆಗೆ ಉತ್ತರಿಸಿದ್ದ ಅವರು, ಬಾಂಗ್ಲಾದವರು ಇಡೀ ದೇಶದಲ್ಲಿ ಇದ್ದಾರೆ. ಅವರು ಎಲ್ಲಿಂದ ಬರುತ್ತಾರೆ?, ಅವರು ಬರದಂತೆ ಬಿಎಸ್‌ಎಫ್ ತಡೆಯಬೇಕು. ಅವರು ಕೇವಲ ಕರ್ನಾಟಕಕ್ಕೆ ಮಾತ್ರ ಬರುವುದಿಲ್ಲ. ದೇಶಾದ್ಯಂತ ಬೇರೆ ಬೇರೆ ಕಡೆ ಹೋಗಿ ವಾಸವಾಗಿದ್ದಾರೆ. ಲಕ್ಷಾಂತರ ಸಂಖ್ಯೆಯಲ್ಲಿ ಬಾಂಗ್ಲಾದವರು ಬಂದಿದ್ದಾರೆ ಅನ್ನೋದು ಸತ್ಯಕ್ಕೆ ದೂರವಾದ ಮಾತು. 2021ರಲ್ಲಿ 15 ಜನರನ್ನು ಗಡಿಪಾರು ಮಾಡಲಾಗಿದೆ. 2022ರಲ್ಲಿ 21 ಅಕ್ರಮ ಬಾಂಗ್ಲಾದವರನ್ನು ಗಡಿಪಾರು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದರು.
