ಉದಯವಾಹಿನಿ, ಮೋರಾನ್ (ಅಸ್ಸಾಂ): ಫೆ.14ರಂದು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು, ಈಶಾನ್ಯ ರಾಜ್ಯದಲ್ಲಿ ಮೊದಲ ಬಾರಿಗೆ ನಿರ್ಮಾಣವಾಗಿರುವ ರಾಷ್ಟ್ರೀಯ ಹೆದ್ದಾರಿ ಲ್ಯಾಡಿಂಗ್ ಸೌಲಭ್ಯದ ಉದ್ಘಾಟನೆ ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮಕ್ಕೂ ಮುನ್ನ ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು ಈ ಸೌಲಭ್ಯದಲ್ಲಿ ಪರೀಕ್ಷಾರ್ಥ ವಿಮಾನ ಹಾರಾಟ ನಡೆಸಿವೆ.
ಅಸ್ಸಾಂನ ಮೋರಾನ್ನಲ್ಲಿ ಭಾರತೀಯ ವಾಯು ಪಡೆ (ಐಎಎಫ್) ಹೊಸದಾಗಿ ತುರ್ತು ಲ್ಯಾಂಡಿಂಗ್ ಸೌಲಭ್ಯ ಪ್ರದೇಶವನ್ನು ನಿರ್ಮಾಣ ಮಾಡಿದೆ. ಈ ಚತುಷ್ಪಥ ಹೆದ್ದಾರಿಯಲ್ಲಿ ವಿಮಾನವನ್ನು ಯಶಸ್ವಿ ಲ್ಯಾಂಡಿಂಗ್ ಮತ್ತು ಟೇಕ್- ಆಫ್‌ಗಳ ಪರೀಕ್ಷಾರ್ಥ ಹಾರಾಟ ನಡೆಸಿದ್ದು, ಎಲ್ಲರ ಆಕರ್ಷಣೆಯನ್ನು ಹೆಚ್ಚಿಸಿದೆ. ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ದಿಬ್ರುಗಢ ಜಿಲ್ಲಾಡಳಿತ, ಭಾರತೀಯ ವಾಯುಪಡೆ ಮತ್ತು ನಿರ್ಮಾಣದಲ್ಲಿ ತೊಡಗಿರುವ ಇಎಲ್ಎಫ್ ಏಜೆನ್ಸಿಗಳು ಅಂತಿಮ ಹಂತದ ಸಿದ್ಧತೆಗಳನ್ನು ನಡೆಸಿವೆ. ಫೆಬ್ರವರಿ 6 ರಿಂದ ಈ ಚತುಷ್ಪಥ ಪ್ರದೇಶದಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಭಾರತೀಯ ವಾಯು ಪಡೆಯ ಈ ಸ್ಥಳದಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಎಲ್ಲಾ ಪರೀಕ್ಷಾರ್ಥ ಕಾರ್ಯಾಚರಣೆಗಳನ್ನು ನಿಕಟವಾಗಿ ಮೇಲ್ವಿಚಾರಣೆ ನಡೆಸಲಾಗುತ್ತಿದೆ.
ಈಶಾನ್ಯದಲ್ಲಿ ಮೊದಲ ತುರ್ತು ಲ್ಯಾಂಡಿಂಗ್ ವ್ಯವಸ್ಥೆ: ಮೋರಾನ್‌ನ ಜಟಿಯಾನಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ 127ರ ಡೆಮೋ – ಮೋರಾನ್ ವಿಭಾಗದಲ್ಲಿ 4.2 ಕಿಲೋಮೀಟರ್ ಉದ್ದದ ತುರ್ತು ಲ್ಯಾಂಡಿಂಗ್ ಸೌಲಭ್ಯವನ್ನು ನಿರ್ಮಿಸಲಾಗಿದೆ. ಈಶಾನ್ಯ ಪ್ರದೇಶದಲ್ಲಿ ರೂಪುಗೊಂಡಿರುವ ಮೊದಲ ಹೆದ್ದಾರಿ ಆಧಾರಿತ ತುರ್ತು ಲ್ಯಾಂಡಿಂಗ್ ಸೌಲಭ್ಯ ಇದಾಗಿದೆ. ಭವಿಷ್ಯದಲ್ಲಿ ತುರ್ತು ಪರಿಸ್ಥಿತಿಗಳು ಅಥವಾ ಕಾರ್ಯತಂತ್ರದ ಕಾರ್ಯಾಚರಣೆಗಳ ಸಮಯದಲ್ಲಿ ಈ ಪ್ರದೇಶವು ರಫೇಲ್, ಸುಖೋಯ್ ಮತ್ತು ಮಿಗ್ ಜೆಟ್‌ಗಳಂತಹ ಸುಧಾರಿತ ಐಎಎಫ್ ಯುದ್ಧ ವಿಮಾನಗಳ ಲ್ಯಾಂಡಿಂಗ್‌ಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುವಂತೆ ನಿರ್ಮಿಸಲಾಗಿದೆ. ಇದು ಈ ಪ್ರದೇಶದಲ್ಲಿ ಭಾರತದ ರಕ್ಷಣಾ ಸನ್ನದ್ಧತೆಯನ್ನು ಗಮನಾರ್ಹವಾಗಿ ಹೆಚ್ಚಿಸುವಂತೆ ಮಾಡುವ ಗುರಿಯನ್ನು ಹೊಂದಿದೆ.
