ಉದಯವಾಹಿನಿ, ಮುಂಬೈ (ಮಹಾರಾಷ್ಟ್ರ): ಉಪಮುಖ್ಯಮಂತ್ರಿಯಾಗಿ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡ ಎನ್‌ಸಿಪಿಯ ಹಿರಿಯ ನಾಯಕಿ ಹಾಗೂ ದಿವಂಗತ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಇಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದಾರೆ. ಅಧಿಕಾರ ವಹಿಸಿಕೊಂಡ ಬಳಿಕ ದೆಹಲಿಗೆ ಇದು ಅವರ ಮೊದಲ ಭೇಟಿಯಾಗಿದೆ. ಅವರ ಈ ಭೇಟಿ ಮಹತ್ವ ಪಡೆದಿದೆ.ಪ್ರಧಾನಿ ಮತ್ತು ಗೃಹ ಸಚಿವರ ಭೇಟಿ ಬಳಿಕ ಎನ್‌ಸಿಪಿಯ ಸಭೆ ನಡೆಸಲಿದ್ದಾರೆ ಎಂಬ ಮಾಹಿತಿ ಇದ್ದು, ಈ ಸಭೆಯಲ್ಲಿ ಅವರು ತಮ್ಮ ಪುತ್ರ ಪಾರ್ಥ್ ಪವಾರ್ ಅವರನ್ನು ಎನ್‌ಸಿಪಿಯ (ಅಜಿತ್ ಪವಾರ್ ಬಣ) ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಘೋಷಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಇನ್ನು ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ಅವರನ್ನು ಕಳೆದ ಎರಡು ದಿನಗಳ ಹಿಂದೆಯಷ್ಟೇ ಪುತ್ರ ಪಾರ್ಥ್ ಮತ್ತು ಸುನೇತ್ರಾ ಅವರು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದ್ದರು.ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೋಮವಾರ ತಡರಾತ್ರಿ ದೆಹಲಿಗೆ ಅನಿರೀಕ್ಷಿತ ಭೇಟಿ ನೀಡಿದ್ದು, ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಕೂಡ ಇಂದು ದೆಹಲಿಗೆ ತೆರಳಲಿದ್ದಾರೆ ಎಂಬ ಮಾಹಿತಿ ಇದೆ. ಎನ್‌ಸಿಪಿ ರಾಜ್ಯಾಧ್ಯಕ್ಷ, ಲೋಕಸಭಾ ಸಂಸದ ಸುನಿಲ್ ತತ್ಕರೆ ಮತ್ತು ಎನ್‌ಸಿಪಿ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಮತ್ತು ರಾಜ್ಯಸಭಾ ಸಂಸದ ಪ್ರಫುಲ್ ಪಟೇಲ್ ಕೂಡ ಸುನೇತ್ರಾ ಅವರೊಂದಿಗೆ ದೆಹಲಿಗೆ ಭೇಟಿ ನೀಡಲಿದ್ದಾರೆ.
ಇಂದಿನ ದೆಹಲಿ ಭೇಟಿ ರಾಜಕೀಯವಾಗಿ ಮಹತ್ವ ಪಡೆದಿದೆ. ಅಜಿತ್ ಪವಾರ್ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿಯ ಎರಡು ಬಣಗಳ ವಿಲೀನಕ್ಕೆ ಸಂಬಂಧಿಸಿದ ಮಾತುಕತೆ ಸೇರಿದಂತೆ ಹಲವು ವಿಚಾರಗಳು ಚರ್ಚೆಗೆ ಬರಲಿವೆ ಎಂಬ ಮಾಹಿತಿ ಲಭ್ಯವಾಗಿದೆ.
