ಉದಯವಾಹಿನಿ, ಗೋರಖ್‌ಪುರ : ಉತ್ತರಪ್ರ
ದೇಶದ ಗೋರಖ್‌ಪುರ ಜಿಲ್ಲೆಯ ಬಧಾಲ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ರುದೌಲಿ ಗ್ರಾಮದಲ್ಲಿ ಬುಧವಾರ ಕೀಳು ಅಭಿರುಚಿಯ ಸಂಗೀತ ಜೋರಾಗಿ ಕೇಳಿಸುತ್ತಿದ್ದ ವಿಚಾರದಲ್ಲಿ ವಾಗ್ವಾದ ನಡೆದು, ದಲಿತ ವ್ಯಕ್ತಿಯೊಬ್ಬರನ್ನು ಗುಂಡಿಟ್ಟು ಹತ್ಯೆ ಮಾಡಿದ ಘಟನೆ ನಡೆದಿದೆ. ಗ್ರಾಮದ ನಿವಾಸಿ ರಾಜ್ ಕಿಶೋರ್ (45) ಕೊಲೆಯಾದ ವ್ಯಕ್ತಿ. ಬುಧವಾರ ನಸುಕಿನಲ್ಲಿ ಕಿಶೋರ್ ಅವರನ್ನು ಸುನಿಲ್ ಯಾದವ್ ಗುಂಡಿಕ್ಕಿ ಕೊಂದಿದ್ದಾನೆ. ಕಿಶೋರ್ ಕುಟುಂಬದ ಮೂವರು ಸದಸ್ಯರು ಗಾಯಗೊಂಡಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು, ಬಂಧಿಸಲು ಪೊಲೀಸ್ ತಂಡಗಳು ಪ್ರಯತ್ನಿಸುತ್ತಿವೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಗ್ರೋವರ್ ಹೇಳಿದ್ದಾರೆ.ಕಿಶೋರ್ ಅವರ ಮನೆಯ ಬಳಿ ಸುನೀಲ್ ಯಾದವ್ ಎಂಬಾತ ತನ್ನ ಟ್ರ್ಯಾಕ್ಟರ್‌ನಲ್ಲಿ ಅಶ್ಲೀಲ ಸಂಗೀತವನ್ನು ಜೋರಾಗಿ ಹಾಕಿಕೊಂಡು ಕೇಳುತ್ತಿದ್ದ. ಇದಕ್ಕೆ ಕಿಶೋರ್ ಆಕ್ಷೇಪ ವ್ಯಕ್ತಪಡಿಸಿದಾಗ, ಸುನಿಲ್ ಯಾದವ್ ಸ್ಥಳಕ್ಕೆ ತನ್ನ ಬೆಂಬಲಿಗರನ್ನು ಕರೆಸಿಕೊಂಡು ಕಿಶೋರ್ ಮತ್ತು ಅವರ ಕುಟುಂಬ ಸದಸ್ಯರ ಮೇಲೆ ದಾಳಿ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸುನಿಲ್ ಯಾದವ್ ಸೇರಿ ಏಳು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
