ಉದಯವಾಹಿನಿ, ಅನಂತಪುರಂ (ಆಂಧ್ರಪ್ರದೇಶ): ನಾವೆಲ್ಲಾ ಓಡಿಸುವ ಸೈಕಲ್ನಲ್ಲಿ ಪೆಡಲ್ ಮತ್ತು ಚೈನ್ ತುಂಬಾ ಮುಖ್ಯ. ಆದರೆ ಆಂಧ್ರಪ್ರದೇಶದ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಇವೆರಡೂ ಇಲ್ಲದೇ ಇರುವ ಹೊಸ ಯುಗದ ಸೈಕಲ್ ಕಂಡು ಹಿಡಿದಿದ್ದಾರೆ. ಇದು ಪೆಡಲ್ ಮತ್ತು ಚೈನ್ ಇಲ್ಲದೆ ಚಲಿಸುತ್ತಿದೆ. ಈ ವಿಶೇಷ ಬೈಸಿಕಲ್ ಕೇವಲ ಜನಸಾಮಾನ್ಯರಷ್ಟೇ ಅಲ್ಲ ಪ್ರಧಾನಿ ಮೋದಿ ಅವರ ಗಮನವನ್ನು ಸೆಳೆದಿದೆ.
ಬ್ಯಾಟರಿ ಚಾಲಿತ ಬೈಸಿಕಲ್: ಅನಂತಪುರದ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಅಟಲ್ ಇನ್ಕ್ಯುಬೇಷನ್ ಸೆಂಟರ್‌ನಲ್ಲಿ ಸಿವಿಲ್ ಇಂಜಿಯರಿಂಗ್ ವಿದ್ಯಾರ್ಥಿಗಳು ಬ್ಯಾಟರಿ ಚಾಲಿತ ಈ ಸೈಕಲ್ ಅಭಿವೃದ್ಧಪಡಿಸಿದ್ದಾರೆ. ವಿಜಯವಾಡದ ಸಂಜೀವ್ ರತ್ನಂ, ಪಶ್ಚಿಮ ಗೋದಾವರಿಯ ಜಿಲ್ಲೆಯ ಭಟ್ಟಿಪೋಲ್ರು ಮತ್ತು ಪಾಮರ್ರು ಹಾಗೂ ಲೋಕೇಶ್, ಮಹಾದೇವ್ ಮತ್ತು ಮನೀಶ್ ಎಂಬ ವಿದ್ಯಾರ್ಥಿಗಳ ಶ್ರಮದಿಂದ ಈ ಸೈಕಲ್ ತಯಾರಾಗಿದೆ. ಸಾಮಾನ್ಯ ಜನರಿಗೆ ಕೈಗೆಟುಕುವ ದರದಲ್ಲಿ, ಬಳಕೆದಾರ ಸ್ನೇಹಿ ಮತ್ತು ಕಡಿಮೆ ಇಂಧನ ಬಳಕೆಯಾಗುವ ರೀತಿ ದ್ವಿಚಕ್ರ ವಾಹನ ಅಭಿವೃದ್ಧಿ ಪಡಿಸುವ ಗುರಿಯೊಂದಿಗೆ ಈ ಎಲ್ಲ ವಿದ್ಯಾರ್ಥಿಗಳು ಒಟ್ಟಾಗಿ ಕೆಲಸ ಮಾಡಿದ್ದಾರೆ.
ವಿದ್ಯಾರ್ಥಿಗಳು ತಮಗೆ ಹೊಳೆದ ನೂತನ ಸೈಕಲ್ ಕಲ್ಪನೆಯ ಬಗ್ಗೆ ಮೊದಲು ಅಟಲ್ ಇನ್ಕ್ಯುಬೇಷನ್ ಸೆಂಟರ್‌ನಲ್ಲಿರುವ ತಜ್ಞರಿಗೆ ತೋರಿಸಿದ್ದರು. ಆಗ ತಜ್ಞರು ಹೊಸ ಪ್ರಾಜೆಕ್ಟ್ನ ಕಲ್ಪನೆಯನ್ನು ಮೆಚ್ಚಿ, ತಾಂತ್ರಿಕ ಮಾರ್ಗದರ್ಶನ ನೀಡಿ ಬೆನ್ನುತಟ್ಟಿದ್ದರು. ಜೊತೆಗೆ ಅಟಲ್ ಇನ್ಕ್ಯುಬೇಷನ್ ಸೆಂಟರ್, ಕೇಂದ್ರ ಸರ್ಕಾರ ಮತ್ತು ಇತರ ಸಂಸ್ಥೆಗಳ ಬೆಂಬಲದೊಂದಿಗೆ ಈ ಪ್ರಾಜೆಕ್ಟ್ಗೆ 23 ಲಕ್ಷ ಹಣಕಾಸು ನೆರವು ಸಿಕ್ಕಿದೆ. ಈ ಹಣವನ್ನು ಸೈಕಲ್ನ ವಿನ್ಯಾಸವನ್ನು ಪರಿಷ್ಕರಿಸಲು, ದಕ್ಷತೆ ಸುಧಾರಿಸಲು ಮತ್ತು ದೊಡ್ಡ ಪ್ರಮಾಣದಲ್ಲಿ ಬಳಕೆಗೆ ಸಿದ್ಧಗೊಳಿಸಲು ಬಳಸಲು ತಂಡ ನಿರ್ಧರಿಸಿದೆ.
