ಉದಯವಾಹಿನಿ, ಪಾಟ್ನಾ(ಬಿಹಾರ): ಬಿಹಾರದಲ್ಲಿ ಸಂಪೂರ್ಣ ಮದ್ಯ ನಿಷೇಧ ಜಾರಿಗೆ ಬಂದು ಹತ್ತು ವರ್ಷವಾಗಿದೆ. ಅಂದರೆ, 2016ರ ಏಪ್ರಿಲ್ ತಿಂಗಳಲ್ಲಿ ಈ ಕಾನೂನು ಜಾರಿಗೆ ಬಂದಿತ್ತು. ಇದಾದ ನಂತರ 2025ರ ಡಿಸೆಂಬರ್ 31ರವರೆಗೆ ತಪ್ಪಿತಸ್ಥರ ವಿರುದ್ಧ ಸುಮಾರು 10 ಲಕ್ಷ ಎಫ್‌ಐಆರ್‌ಗಳು ದಾಖಲಾಗಿವೆ. 16 ಲಕ್ಷ ಜನರನ್ನು ಬಂಧಿಸಲಾಗಿದೆ. ಈ ಅವಧಿಯಲ್ಲಿ ಸುಮಾರು 4.5 ಕೋಟಿ ಲೀಟರ್ ಅಕ್ರಮ ಮದ್ಯ ಮತ್ತು 1.6 ಲಕ್ಷ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಮಾಹಿತಿಯನ್ನು ರಾಜ್ಯ ಗ್ರಾಮೀಣ ಕಾಮಗಾರಿ ಇಲಾಖೆ ಸಚಿವ ಅಶೋಕ್ ಚೌಧರಿ ನೀಡಿದ್ದಾರೆ.
ಹಾಲಿ ಬಜೆಟ್ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ರವೀಂದ್ರ ಪ್ರಸಾದ್ ಸಿಂಗ್ ಅವರ ಪ್ರಶ್ನೆಗೆ ಚೌಧರಿ ಉತ್ತರಿಸುತ್ತಾ, ಈ ಮೇಲಿನ ಮಹತ್ವದ ದತ್ತಾಂಶ ಒದಗಿಸಿದರು.ರಾಜ್ಯದಲ್ಲಿ ಮಾದಕ ದ್ರವ್ಯ, ಥಿನ್ನರ್ ಹಾಗು ವಿವಿಧ ರೀತಿಯ ವಸ್ತುಗಳೂ ಸೇರಿದಂತೆ ಮಾದಕ ವಸ್ತುಗಳ ಬಳಕೆಯಲ್ಲಾದ ಹೆಚ್ಚಳದ ವಿಷಯವನ್ನು ರವೀಂದ್ರ ಪ್ರಸಾದ್ ಎತ್ತಿದರು. ಈ ಪರಿಸ್ಥಿತಿಯನ್ನು ಪರಿಹರಿಸಲು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಅವರು ಆಗ್ರಹಿಸಿದರು.
ಮಕ್ಕಳಲ್ಲಿ ಥಿನ್ನರ್ ಮತ್ತು ಮಾದಕ ವಸ್ತುಗಳ ಬಳಕೆಯಲ್ಲಿ ಸ್ವಲ್ಪ ಹೆಚ್ಚಳವಾಗಿದೆ ಎಂಬುದು ನಿಜ. ಆದರೆ, ಸರ್ಕಾರ ಈ ವಿಚಾರದಲ್ಲೂ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಈ ಅವಧಿಯಲ್ಲಿ ನಾವು 15,800 ಕಿಲೋ ಗಾಂಜಾ, 240 ಕಿಲೋ ಅಫೀಮು, 350 ಕಿಲೋ ಚರಸ್ ಮತ್ತು 40,000 ಲೀಟರ್ ಕೆಮ್ಮಿನ ಸಿರಪ್ ಅನ್ನೂ ಜಪ್ತಿ ಮಾಡಿದ್ದೇವೆ ಎಂದು ಚೌಧರಿ ವಿವರ ನೀಡಿದರು.
ಬಿಹಾರದ ಸರನ್ ಪದವೀಧರ ಕ್ಷೇತ್ರ ಪ್ರತಿನಿಧಿಸುವ ಮತ್ತೊಬ್ಬ ಎಂಎಲ್‌ಸಿ ವೀರೇಂದ್ರ ನಾರಾಯಣ್ ಯಾದವ್, ಯುಪಿ ಗಡಿವರೆಗೆ ಇಡೀ ಘಾಘರಾ ನದಿ ಜಲಾನಯನ ಪ್ರದೇಶದಲ್ಲಿ ವಿಶೇಷವಾಗಿ ಮಕ್ಕಳಲ್ಲಿ ಈ ವ್ಯಸನ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಯುಪಿ ಗಡಿಯಲ್ಲಿ ಡಜನ್‌ಗಟ್ಟಲೆ ಮದ್ಯದ ಅಂಗಡಿಗಳಿವೆ. ಅಲ್ಲಿಂದ ಮದ್ಯ ಮತ್ತು ಇತರ ಮಾದಕ ವಸ್ತುಗಳು ಬಿಹಾರಕ್ಕೆ ಸಲೀಸಾಗಿ ಬರುತ್ತಿವೆ ಎಂದು ವೀರೇಂದ್ರ ಹೇಳಿದರು. ವೀರೇಂದ್ರರ ಮಾತಿಗೆ ಪ್ರತಿಕ್ರಿಯಿಸಿದ ಸಚಿವ ಚೌಧರಿ, ರಾಜ್ಯ ಸರ್ಕಾರ ಉತ್ತರ ಪ್ರದೇಶದ ಗಡಿಯಲ್ಲಿ 22, ಜಾರ್ಖಂಡ್ ಗಡಿಯಲ್ಲಿ 19, ಪ.ಬಂಗಾಳ ಗಡಿಯಲ್ಲಿ 8 ಮತ್ತು ನೇಪಾಳದ ಅಂತಾರಾಷ್ಟ್ರೀಯ ಗಡಿಯಲ್ಲಿ 17 ಚೆಕ್‌ಪೋಸ್ಟ್‌ಗಳನ್ನು ಆರಂಭಿಸಿದೆ. ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಮತ್ತು ಬ್ರೀಥಲೈಸರ್‌ಗಳಿವೆ. ಸರ್ಕಾರಿ ಸಂಸ್ಥೆಗಳು ಅಕ್ರಮ ಮದ್ಯ ಮತ್ತು ಮಾದಕ ದ್ರವ್ಯಗಳನ್ನು ನಿಗ್ರಹಿಸಲು ನೇಪಾಳ ಗಡಿಯಲ್ಲಿ ದಾಳಿ, ಶೋಧ ಕಾರ್ಯಾಚರಣೆಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.
