ಉದಯವಾಹಿನಿ, ವಾಷಿಂಗ್ಟನ್(ಯುಎಸ್‌ಎ): ಟೆಹ್ರಾನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಬೇಡಿಕೆಯನ್ನು ನಿರಾಕರಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಜತೆ ಮಾತುಕತೆ ಮುಂದುವರೆಯಬೇಕು ಎಂದಿದ್ದಾರೆ.
ಇರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿ ಯೋಜನೆ ಮತ್ತು ಆ ಭಾಗದ ಉಗ್ರಗಾಮಿ ಗುಂಪುಗಳಿಗೆ ನೀಡುತ್ತಿರುವ ಬೆಂಬಲವನ್ನು ನಿರ್ಬಂಧಿಸುವ ಸಮಗ್ರ ಒಪ್ಪಂದಕ್ಕೆ ಒತ್ತಡ ಹೇರಲು ನೆತನ್ಯಾಹು ಬಯಸಿದ್ದರು.
ನೆತನ್ಯಾಹು ಅವರೊಂದಿಗೆ ಮೂರು ಗಂಟೆಗಳ ಕಾಲ ಸುದೀರ್ಘ ಚರ್ಚೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್, ಮಾತುಕತೆ ಸಾಧ್ಯವಾದರೆ ಅದು ನಮ್ಮ ಆದ್ಯತೆಯಾಗಿರುತ್ತದೆ. ಸಾಧ್ಯವಾಗದೇ ಇದ್ದರೆ ಫಲಿತಾಂಶ ಏನಾಗುತ್ತದೆ ಎಂಬುದನ್ನು ನೋಡಬೇಕೆಂದ ಟ್ರಂಪ್, ಕಳೆದ ವರ್ಷ ಇರಾನ್‌ನ ಪರಮಾಣು ಕಾರ್ಯಕ್ರಮದ ವಿರುದ್ಧ ಅಮೆರಿಕದ ದಾಳಿಯನ್ನು ನೆನಪಿಸುವ ಮೂಲಕ ಕಟು ಎಚ್ಚರಿಕೆ ನೀಡಿದರು.
ಇತ್ತೀಚೆಗೆ ಪ್ರತಿಭಟನಾಕಾರರ ಮೇಲೆ ಟೆಹ್ರಾನ್ ಮಾರಕ, ದಮನಕಾರಿ ಕ್ರಮಗಳನ್ನು ಕೈಗೊಂಡಿದ್ದು, ಇರಾನ್ ವಿರುದ್ಧ ಅಮೆರಿಕದ ಮಿಲಿಟರಿ ಕ್ರಮದ ಬಗ್ಗೆಯೂ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಆದರೆ ಇದೇ ವೇಳೆ ಯುರೇನಿಯಂ ಪುಷ್ಟೀಕರಣದ ಕುರಿತು ಒಮಾನ್ನಲ್ಲಿ ವಾಷಿಂಗ್ಟನ್ ಮತ್ತು ಟೆಹ್ರಾನ್ ಮಾತುಕತೆಗಳನ್ನು ಪುನರಾರಂಭಿಸಿವೆ.
ಕಳೆದ ಜುಲೈನಲ್ಲಿ ಇರಾನ್ ಜತೆ ಇಸ್ರೇಲ್ ನಡೆಸಿದ 12 ದಿನಗಳ ಯುದ್ಧದ ಸಂದರ್ಭದಲ್ಲಿ ಅಮೆರಿಕ ಇರಾನ್‌ನ ಪರಮಾಣು ಸ್ಥಾವರಗಳ ಮೇಲೆ ದಾಳಿ ಮಾಡಿದ್ದು, ನಂತರ ಮಾತುಕತೆಗಳು ಸ್ಥಗಿತಗೊಂಡಿವೆ. ಇನ್ನು, ಟ್ರಂಪ್ ಅವರೊಂದಿಗಿನ ಮಾತುಕತೆಗೆ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನೆತನ್ಯಾಹು, ನಮ್ಮ ಮಾತುಕತೆಯಲ್ಲಿ ಮೊದಲನೆಯ ವಿಚಾರ ಇರಾನ್. ಈ ಕುರಿತಾಗಿ ನಮ್ಮ ಅಭಿಪ್ರಾಯ ತಿಳಿಸುತ್ತೇನೆ. ಇರಾನ್‌ನ ಕ್ಷಿಪಣಿ ಶಸ್ತ್ರಾಗಾರವನ್ನು ಎತ್ತಿ ತೋರಿಸುತ್ತೇವೆ. ಗಾಜಾ ಮತ್ತು ಇತರ ಪ್ರಾದೇಶಿಕ ವಿಷಯಗಳ ಬಗ್ಗೆಯೂ ಚರ್ಚಿಸುವುದಾಗಿ ತಿಳಿಸಿದ್ದರು.
