ಉದಯವಾಹಿನಿ, ಢಾಕಾ(ಬಾಂಗ್ಲಾದೇಶ): ಬಾಂಗ್ಲಾದೇಶದಲ್ಲಿ ಇಂದು ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. ಮಾಜಿ ಪ್ರಧಾನಿ ಶೇಖ್ ಹಸೀನಾ ಪದಚ್ಯುತಗೊಂಡ ನಂತರದ ಮೊದಲ ಚುನಾವಣೆ ಇದು. ಸಂಸತ್ತಿನ 299 (ಒಟ್ಟು 300 ಸ್ಥಾನಗಳು, ಓರ್ವ ಸಾವನ್ನಪ್ಪಿದ್ದು, ಚುನಾವಣೆ ಮುಂದೂಡಿಕೆಯಾಗಿದೆ) ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದ್ದು, ಬೆಳಿಗ್ಗೆ 7.30ರಿಂದ ಸಂಜೆ 4.30ರ ವರೆಗೆ ಮತದಾನ ನಡೆಯಲಿದೆ.

ಈ ಚುನಾವಣೆಯಲ್ಲಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷ ಪಾಲ್ಗೊಳ್ಳದಂತೆ ನಿಷೇಧ ಹೇರಲಾಗಿದೆ. ಹಾಗಾಗಿ, ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ(ಬಿಎನ್‌ಪಿ) ಮತ್ತು ಜಮಾತೆ-ಇ-ಇಸ್ಲಾಮಿ ಪಕ್ಷಗಳ ನಡುವೆ ತುರುಸಿನ ಪೈಪೋಟಿ ಕಾಣುತ್ತಿದೆ. ಇವುಗಳನ್ನು ಹೊರತುಪಡಿಸಿ ರಾಷ್ಟ್ರೀಯ ನಾಗರಿಕ ಪಕ್ಷ (ಎನ್‌ಸಿಪಿ), ಜಾತಿಯಾ ಪಕ್ಷ (ಜೆಪಿ-ಕ್ವಾಡರ್), ಜಾತಿಯಾ ಪಕ್ಷ (ಜೆಪಿ-ಎರ್ಷಾದ್), ಎಡ ಪ್ರಜಾಸತ್ತಾತ್ಮಕ ಒಕ್ಕೂಟ ಮತ್ತು ಅಮರ್ ಬಾಂಗ್ಲಾದೇಶ ಪಕ್ಷ (ಎಬಿ ಪಕ್ಷ) ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪ್ರಮುಖ ಪಕ್ಷಗಳಾಗಿವೆ.
ಬಾಂಗ್ಲಾದಲ್ಲಿ 59 ನೋಂದಾಯಿತ ಪಕ್ಷಗಳಿವೆ. ಇವುಗಳಲ್ಲಿ 51 ಪಕ್ಷಗಳು ಈ ಚುನಾವಣೆಯಲ್ಲಿ ಭಾಗವಹಿಸುತ್ತಿವೆ. 249 ಸ್ವತಂತ್ರ ಪಕ್ಷಗಳೂ ಸೇರಿದಂತೆ 1,981 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಸಾವು ಮತ್ತು ಇವರ ದೀರ್ಘಾವಧಿಯ ಪ್ರತಿಸ್ಪರ್ಧಿ ಶೇಖ್ ಹಸೀನಾರ ಅವಾಮಿ ಲೀಗ್ ಪಕ್ಷವನ್ನು ನಿಷೇಧಿಸಿದ ನಂತರದಲ್ಲಿ ನಡೆಯುತ್ತಿರುವ ಈ ಚುನಾವಣೆ ದೇಶದ ರಾಜಕೀಯ ಇತಿಹಾಸದಲ್ಲಿ ಮಹತ್ವದ್ದೆಂದು ಪರಿಗಣಿಸಲಾಗಿದೆ. ಅದಲ್ಲದೇ, ದಶಕಗಳ ‘ಬೇಗಂಗಳ ಕದನ’ ಮೀರಿದ ಮಹತ್ವದ ತಿರುವು ಎಂದು ನೋಡಲಾಗುತ್ತಿದೆ. ಚುನಾವಣೆಗಾಗಿ ದೇಶದೆಲ್ಲೆಡೆಯ ಮತದಾನ ಕೇಂದ್ರಗಳಿಗೆ ಮತಪತ್ರಗಳು ಮತ್ತು ಇತರ ಸಾಮಗ್ರಿಯನ್ನು ಬಿಗಿ ಭದ್ರತೆಯಲ್ಲಿ ನಿನ್ನೆ(ಬುಧವಾರ) ಸಾಗಿಸಲಾಗಿದೆ ಎಂದು ಅಲ್ಲಿನ ಸ್ಥಳೀಯ ದಿನಪತ್ರಿಕೆಗಳು ವರದಿ ಮಾಡಿವೆ.

ಜೆನ್‌ ಝೀಗಳು ಯಾರ ಪರ?: ಬಾಂಗ್ಲಾ ವಿಶ್ವದ ಎಂಟನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮತ್ತು ಅಂದಾಜು 127 ಮಿಲಿಯನ್ ಅರ್ಹ ಮತದಾರರಿರುವ ದೇಶ. ಇಲ್ಲಿನ ಸುಮಾರು ಅರ್ಧದಷ್ಟು ಮತದಾರರು 18-37 ವರ್ಷ ವಯಸ್ಸಿನವರಾಗಿದ್ದಾರೆ. ಈ ಪೈಕಿ 4.57 ಮಿಲಿಯನ್ ಜನರು ಇದೇ ಮೊದಲ ಬಾರಿಗೆ ವೋಟ್ ಮಾಡುತ್ತಿದ್ದಾರೆ ಎಂದು ವರದಿಗಳು ಹೇಳುತ್ತಿವೆ.

 

Leave a Reply

Your email address will not be published. Required fields are marked *

error: Content is protected !!