ಪ್ರಪಂಚದಲ್ಲಿ ಅನೇಕ ವಿಚಿತ್ರ ಮತ್ತು ಅಚ್ಚರಿ ಮೂಡಿಸುವ ಸ್ಥಳಗಳಿವೆ. ಆದರೆ ಮಳೆಯೇ ಬೀಳದ ಹಳ್ಳಿಯೊಂದಿದೆ; ಅಷ್ಟೇ ಅಲ್ಲ ಇಂತಹ ಜಾಗದಲ್ಲೂ ಕೂಡ ಕೃಷಿ ನಡೆಯುತ್ತಿದೆ ಎಂದರೆ ನಂಬಲು ಕಷ್ಟವಾಗಬಹುದು. ಆದರೆ ಇದು ನಿಜ.. ಯೆಮೆನ್ ದೇಶದಲ್ಲಿರುವ ಅಲ್ ಹುತೈಬ್ ಎಂಬ ಹಳ್ಳಿ ಇಂತಹವೇ ಒಂದು ಅದ್ಭುತ ಸ್ಥಳ. ಇಲ್ಲಿ ಒಂದು ಹನಿ ಮಳೆ ಬೀಳದಿದ್ದರೂ ಇಲ್ಲಿನ ಜನ ಕೃಷಿಯಲ್ಲಿ ಯಶಸ್ವಿಯಾಗಿದ್ದಾರೆ.
ಅಲ್ ಹುತೈಬ್ ಹಳ್ಳಿ ಸಮುದ್ರಮಟ್ಟದಿಂದ ಸುಮಾರು 3,200 ಮೀಟರ್ ಎತ್ತರದಲ್ಲಿದೆ. ಸಾಮಾನ್ಯವಾಗಿ ಮಳೆ ಸುರಿಸಲು ಕಾರಣವಾಗುವ ಮೋಡಗಳು 1,500 ರಿಂದ 2,000 ಮೀಟರ್ ಎತ್ತರದಲ್ಲಿ ತೇಲುತ್ತವೆ. ಆದರೆ ಈ ಹಳ್ಳಿ ಮೋಡಗಳಿಗಿಂತಲೂ ಎತ್ತರದಲ್ಲಿರುವುದರಿಂದ ಮಳೆ ಕೂಡ ಇಲ್ಲಿ ತಲುಪುವುದಿಲ್ಲ.
ಮಳೆ ಇಲ್ಲದ ಕಾರಣ ಇಲ್ಲಿ ಹವಾಮಾನವೂ ಸಹ ವಿಶಿಷ್ಟವಾಗಿದೆ. ಬೆಳಗಿನ ವೇಳೆಯಲ್ಲಿ ತಂಪಾದ ಗಾಳಿ ಬೀಸುತ್ತದೆ. ಆದರೆ ಸೂರ್ಯೋದಯವಾದ ಬಳಿಕ ತಾಪಮಾನ ವೇಗವಾಗಿ ಏರುತ್ತದೆ ಮತ್ತು ಬಿಸಿಲು ಹೆಚ್ಚಾಗುತ್ತದೆ. ಮಳೆ ಇಲ್ಲದಿದ್ದರೂ ಪ್ರಕೃತಿಯ ಸೌಂದರ್ಯಕ್ಕೇನು ಇಲ್ಲಿ ಕಡಿಮೆ ಇಲ್ಲ.
ಇಲ್ಲಿನ ಜನರು ಪರ್ವತ ಪ್ರದೇಶಗಳಲ್ಲಿ ಹಂತ ಹಂತವಾಗಿ ಭೂಮಿಯನ್ನು ಸಮತಟ್ಟಾಗಿ ಮಾಡಿ ಕೃಷಿ ಮಾಡುತ್ತಾರೆ. ಮಳೆಯಿಲ್ಲದ ಪರಿಸ್ಥಿತಿಯಲ್ಲಿ ಬದುಕಲು ಅವರು ಹಳೆಯ ಕಾಲದಿಂದಲೂ ಬಳಸುತ್ತಿರುವ ನೀರು ಸಂಗ್ರಹಿಸುವ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಮಂಜು, ಇಬ್ಬನಿ ಮತ್ತು ಇತರ ಸಹಜ ತೇವಾಂಶವನ್ನು ಬಳಸಿಕೊಂಡು ಬೆಳೆ ಬೆಳೆಸುತ್ತಾರೆ.ಈ ಪ್ರದೇಶದ ಅತ್ಯಂತ ಪ್ರಸಿದ್ಧ ಉತ್ಪನ್ನವೆಂದರೆ ಯೆಮೆನ್ ಕಾಫಿ. ಅಲ್ ಹುತೈಬ್ ಪ್ರದೇಶದಲ್ಲಿ ಬೆಳೆಯುವ ಕಾಫಿಗೆ ವಿಶಿಷ್ಟವಾದ ರುಚಿ ಮತ್ತು ಸುವಾಸನೆ ಇದೆ. ವಿಶ್ವದ ಅನೇಕ ಭಾಗಗಳಲ್ಲಿ ಯೆಮೆನ್ ಕಾಫಿಗೆ ಹೆಚ್ಚಿನ ಬೇಡಿಕೆ ಇದೆ. ಮಳೆ ಇಲ್ಲದಿದ್ದರೂ ಕೃಷಿ ಮೂಲಕ ಬದುಕು ಸಾಗಿಸುತ್ತಿರುವ ಈ ಹಳ್ಳಿಯ ಜನರ ಪರಿಶ್ರಮ ಮತ್ತು ಚಾತುರ್ಯ ಎಲ್ಲರಿಗೂ ಮಾದರಿಯಾಗಿದೆ.
