ಹಾವು ಕಚ್ಚಿದರೂ ಹೆದರದೇ ಬದುಕುವ, ಹುಲಿಯನ್ನೇ ಬೆದರಿಸುವ ಏಕೈಕ ಪ್ರಾಣಿಯನ್ನು ಎಂದಾದರೂ ನೋಡಿದ್ದೀರಾ? ವೈಜ್ಞಾನಿಕವಾಗಿ ಮೆಲ್ಲಿವೊರಾ ಕ್ಯಾಪೆನ್ಸಿಸ್ ಎಂದು ಕರೆಯಲಾಗುವ ಈ ಜೀವಿಯನ್ನು ಜಗತ್ತಿನ ಅತ್ಯಂತ ನಿರ್ಭೀತ ಹಾಗೂ ಧೈರ್ಯಶಾಲಿ ಪ್ರಾಣಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಸಣ್ಣ ಕರಡಿಯನ್ನು ಹೋಲುವ ಈ ಪ್ರಾಣಿ ತನ್ನ ಗಾತ್ರಕ್ಕಿಂತ ಅನೇಕ ಪಟ್ಟು ದೊಡ್ಡ ಹಾಗೂ ಅಪಾಯಕಾರಿ ಶತ್ರುಗಳನ್ನು ಎದುರಿಸುವ ಸಾಮರ್ಥ್ಯ ಹೊಂದಿದೆ. ಈ ಪ್ರಾಣಿ ಬೇರೆ ಯಾವುದೂ ಅಲ್ಲ ಅದುವೇ ಹನಿ ಬ್ಯಾಡ್ಜರ್‌.

ಹನಿ ಬ್ಯಾಡ್ಜರ್‌ಗಳು ಹೆಚ್ಚಾಗಿ ಆಫ್ರಿಕಾ, ನೈಋತ್ಯ ಏಷ್ಯಾ ಹಾಗೂ ಭಾರತೀಯ ಉಪಖಂಡದ ಕಾಡುಗಳು, ಮರುಭೂಮಿಗಳು ಮತ್ತು ಕಲ್ಲಿನ ಪರ್ವತ ಪ್ರದೇಶಗಳಲ್ಲಿ ವಾಸಿಸುತ್ತವೆ. ಇವು ಅತ್ಯಂತ ಬುದ್ಧಿವಂತ ಪ್ರಾಣಿಗಳಾಗಿದ್ದು, ಈಜುವಲ್ಲಿ, ಮರ ಹತ್ತುವಲ್ಲಿ ಹಾಗೂ ಕಠಿಣ ಪರಿಸ್ಥಿತಿಗಳಲ್ಲೂ ಬದುಕುವಲ್ಲಿ ಅಪಾರ ಕೌಶಲ್ಯವನ್ನು ಹೊಂದಿವೆ. ಆಹಾರದ ವಿಷಯಕ್ಕೆ ಬಂದರೆ, ಜೇನುತುಪ್ಪ ಇವುಗಳ ಅತ್ಯಂತ ಪ್ರಿಯ ಆಹಾರ. ಅದಲ್ಲದೆ, ವಿಷಕಾರಿ ಹಾವುಗಳು, ಜೇನುಗೂಡುಗಳು, ಪಕ್ಷಿಗಳು, ದಂಶಕಗಳು ಮತ್ತು ಇತರ ಸಣ್ಣ ಸರೀಸೃಪಗಳು ಹಾಗೂ ಸಸ್ತನಿಗಳನ್ನೂ ಇವು ಬೇಟೆಯಾಡುತ್ತವೆ.

ಹನಿ ಬ್ಯಾಡ್ಜರ್‌ನ ಅತ್ಯಂತ ವಿಶೇಷತೆ ಎಂದರೆ ಅದರ ದಪ್ಪ ಮತ್ತು ಬಲವಾದ ಚರ್ಮ. ಇದು ವಿಷಕಾರಿ ಹಾವುಗಳ ಕಡಿತವನ್ನೂ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದು, ಹಾವು ಕಚ್ಚಿದರೂ ಕೆಲ ಸಮಯದ ಅಸ್ವಸ್ಥತೆಯ ಬಳಿಕ ಮತ್ತೆ ಚೇತರಿಸಿಕೊಳ್ಳುತ್ತದೆ. ಜೊತೆಗೆ, ಚೂಪಾದ ಉಗುರುಗಳು ಮತ್ತು ಬಲವಾದ ದವಡೆಗಳು ಇದನ್ನು ಭಯಾನಕ ಬೇಟೆಗಾರನಾಗಿಸುತ್ತವೆ. ಇದೇ ಕಾರಣಕ್ಕೆ ಸಿಂಹ, ಚಿರತೆಗಳಂತಹ ಭೀಕರ ಪ್ರಾಣಿಗಳೂ ಸಹ ಹನಿ ಬ್ಯಾಡ್ಜರ್‌ನೊಂದಿಗೆ ನೇರ ಸಂಘರ್ಷಕ್ಕೆ ಇಳಿಯಲು ಹಿಂಜರಿಯುತ್ತವೆ. ಇದರ ಅಸಾಧಾರಣ ಧೈರ್ಯ ಮತ್ತು ನಿರ್ಭೀತ ಸ್ವಭಾವದ ಕಾರಣ, ಹನಿ ಬ್ಯಾಡ್ಜರ್ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ “ವಿಶ್ವದ ಅತ್ಯಂತ ಧೈರ್ಯಶಾಲಿ ಪ್ರಾಣಿ” ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಭಾರತದಲ್ಲಿಯೂ ಪಾಪಿಕೊಂಡಲು ಅಭಯಾರಣ್ಯ ಹಾಗೂ ಕಾವೇರಿ ವನ್ಯಜೀವಿ ಅಭಯಾರಣ್ಯಗಳಲ್ಲಿ ಈ ಅಪರೂಪದ ಜೀವಿಯನ್ನು ಗುರುತಿಸಲಾಗಿದೆ. ಸಣ್ಣ ದೇಹದಲ್ಲೇ ಅಚ್ಚರಿಯ ಶಕ್ತಿ ಮತ್ತು ಧೈರ್ಯ ಹೊಂದಿರುವ ಹನಿ ಬ್ಯಾಡ್ಜರ್ ಪ್ರಕೃತಿಯ ಒಂದು ಅದ್ಭುತ ಜೀವಂತ ಉದಾಹರಣೆಯಾಗಿದೆ.

Leave a Reply

Your email address will not be published. Required fields are marked *

error: Content is protected !!