ಉದಯವಾಹಿನಿ, ಕಲಬುರಗಿ : ಕಲಬುರಗಿಯ ಲಾಡ್ಲೆ ಮಶಾಕ್ ದರ್ಗಾ ಆವರಣದಲ್ಲಿ ಇರುವ ರಾಘವ ಚೈತನ್ಯ ಶಿವಲಿಂಗಕ್ಕೆ ಶಿವರಾತ್ರಿ ದಿನ ಪೂಜೆ ಸಲ್ಲಿಸಲು ಅವಕಾಶ ನೀಡಿರುವ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಫೆಬ್ರವರಿ 15ರಂದು 14 ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಹಿಂದೂ ಭಕ್ತರಿಗೆ ಅನುಮತಿ ನೀಡಲಾಗಿದೆ. ದರ್ಗಾ ಸಮಿತಿಯು ಹಿಂದೂ ಭಕ್ತರು ದರ್ಗಾ ಆವರಣದಲ್ಲಿ ಪೂಜೆ ಸಲ್ಲಿಸದಂತೆ ತಡೆಯುವಂತೆ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಆದರೆ, ಆ ಸ್ಥಳದಲ್ಲಿ ಶತಮಾನಕ್ಕೂ ಹೆಚ್ಚು ಕಾಲದಿಂದ ಶಿವಲಿಂಗ ಅಸ್ತಿತ್ವದಲ್ಲಿದ್ದು, ಕಳೆದ ಎರಡು ವರ್ಷಗಳಿಂದ ಶಿವರಾತ್ರಿ ಪೂಜೆ ನಡೆಯುತ್ತಿದೆ ಎಂದು RTI ಕಾರ್ಯಕರ್ತ ಸಿದ್ರಾಮಯ್ಯ ಹಿರೇಮಠ ನ್ಯಾಯಾಲಯದಲ್ಲಿ ವಾದಿಸಿದ್ದರು.

ಹೈಕೋರ್ಟ್ ಪೀಠವು ಕೆಲ ದಿನಗಳ ಹಿಂದೆ ಸಿದ್ರಾಮಯ್ಯ ಹಿರೇಮಠ ಅವರಿಗೆ ಮಾತ್ರ ಪೂಜೆಗೆ ಅನುಮತಿ ನೀಡಿ, ಇತರರಿಗೆ ಅವಕಾಶ ನಿರಾಕರಿಸಿತ್ತು. ಇದಕ್ಕೆ ವಿರೋಧವಾಗಿ ದರ್ಗಾ ಸಮಿತಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಎಸ್‌ಸಿ ಶರ್ಮಾ ಅವರಿದ್ದ ಪೀಠವು ಈ ಅರ್ಜಿಯನ್ನು ಸಂವಿಧಾನದ 32ನೇ ವಿಧಿಯ ಅಡಿಯಲ್ಲಿ ವಿಚಾರಣೆ ನಡೆಸಲು ನಿರಾಕರಿಸಿತು.

ನ್ಯಾಯಮೂರ್ತಿ ದತ್ತ ಅವರು, ಹೈಕೋರ್ಟ್ ಆದೇಶಗಳನ್ನು ಹೊರಡಿಸುತ್ತಿದೆ ಎಂಬ ಕಾರಣಕ್ಕೆ ಆರ್ಟಿಕಲ್ 32 ಅನ್ನು ಬಳಸಲಾಗುವುದಿಲ್ಲ. ಇದು ಅಖಿಲ ಭಾರತ ಮಟ್ಟದ ಸಮಸ್ಯೆಯಲ್ಲ. ಹೈಕೋರ್ಟ್ ಆದೇಶಗಳಿಂದ ತೊಂದರೆಯಾಗಿದ್ದರೆ, ಬಾಧಿತ ಪಕ್ಷವು ಮೇಲ್ಮನವಿ ಮೂಲಕ ಸೂಕ್ತ ಕಾನೂನು ಪರಿಹಾರಗಳನ್ನು ಕಂಡುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.ಇದೇ ವೇಳೆ ಪೂಜಾ ಸ್ಥಳಗಳ ಕಾಯ್ದೆಗೆ ಸಂಬಂಧಿಸಿದ ಇತರ ಬಾಕಿ ಇರುವ ಪ್ರಕರಣಗಳೊಂದಿಗೆ ಈ ಅರ್ಜಿಯನ್ನು ಸೇರಿಸಬೇಕೆಂಬ ಮನವಿಯನ್ನೂ ನ್ಯಾಯಾಲಯವು ತಿರಸ್ಕರಿಸಿತು. ಅಂತಿಮವಾಗಿ, ಅರ್ಜಿಯನ್ನು ಹಿಂಪಡೆಯಲಾಗಿದೆ ಎಂಬ ಕಾರಣ ನೀಡಿ ಪೀಠವು ಅದನ್ನು ವಜಾಗೊಳಿಸಿತು.

Leave a Reply

Your email address will not be published. Required fields are marked *

error: Content is protected !!