ಉದಯವಾಹಿನಿ, ವಿಜಯಪುರ: ವಿಧಾನಸಭೆ ಚುನಾವಣೆಯಲ್ಲಿ ಅಕ್ರಮವೆಸಗಿದ್ದಾರೆ ಎಂದು ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಆರೋಪಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ವಿಜಯಪುರ ಕ್ಷೇತ್ರದ ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ಎಸಗಿರೋದಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕಾಂಗ್ರೆಸ್ ಶಾಸಕ ಅಬ್ದುಲ್ ಹಮೀದ್ ಮುಶ್ರೀಫ್ ಆರೋಪಿಸಿದ್ದರು. ಈ ಅರ್ಜಿಯನ್ನು ಕಲಬುರಗಿ ಉಚ್ಚ ನ್ಯಾಯಾಲಯ ವಜಾಗೊಳಿಸಿತ್ತು. ಅದಾದ ಬಳಿಕ ಹಮೀದ್ ಮುಶ್ರೀಫ್ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಸುಪ್ರೀಂ ಕೋರ್ಟ್ ಕೂಡ ಅರ್ಜಿ ವಜಾಗೊಳಿಸಿ, ಅರ್ಜಿದಾರರಿಗೆ ದಂಡ ವಿಧಿಸಿದೆ.
ಈ ಕುರಿತು ಶಾಸಕ ಯತ್ನಾಳ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಚುನಾವಣೆಯಲ್ಲಿ ಅಕ್ರಮವೆಸಗಿದ್ದಾರೆ ಎಂದು ನನ್ನ ಮೇಲೆ ಸುಳ್ಳು ಆರೋಪ ಮಾಡಿ Election Petition ದಾಖಲು ಮಾಡಿದ್ದ ಅಬ್ದುಲ್ ಹಮೀದ್ ಖಾಜಾ ಎಂಬುವವರ ಅರ್ಜಿಯನ್ನು ಕಲಬುರಗಿ ಉಚ್ಚ ನ್ಯಾಯಾಲಯವು 2026ರ ಜು.18ರಂದು ವಜಾಗೊಳಿಸಿ, ಅರ್ಜಿದಾರರಿಗೆ ದಂಡ ವಿಧಿಸಿತ್ತು.
ಉಚ್ಚ ನ್ಯಾಯಾಲಯದ ತೀರ್ಪನ್ನು ಖಾಜಾ ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದರು.ಸರ್ವೋಚ್ಛ ನ್ಯಾಯಾಲಯವು ಇವರ ಅರ್ಜಿಯನ್ನು ವಜಾ ಮಾಡಿ, ದಂಡವನ್ನು ವಿಧಿಸಿತ್ತು. ಈ ಸರ್ವೋಚ್ಚ ನ್ಯಾಯಾಲಯದ ಆದೇಶದ ವಿಮರ್ಶೆ ಮಾಡಲು (Review Petition) ಮತ್ತೊಮ್ಮೆ ಅರ್ಜಿ ಸಲ್ಲಿಸಿ, ರಾಜಕೀಯವಾಗಿ ಲಾಭ ಪಡೆಯಬೇಕೆಂದು ಮಾಡಿದ್ದ ಷಡ್ಯಂತ್ರಕ್ಕೆ ಮುಖಭಂಗ ಆಗಿದೆ.
