ಉದಯವಾಹಿನಿ, ಬನಸ್ಕಾಂತ (ಗುಜರಾತ್): ಅಹಮದಾಬಾದ್‌ನಲ್ಲಿ ಎಂಟು ತಿಂಗಳ ಹಿಂದೆ ನಡೆದ ಏರ್ ಇಂಡಿಯಾ ವಿಮಾನ ದುರಂತದ ನೋವು ಇನ್ನೂ ಮಾಸಿಲ್ಲ. ಈ ನಡುವೆ ಅಪಘಾತದಲ್ಲಿ ಮೃತ ನವವಿವಾಹಿತ ಮಗ, ಸೊಸೆಗೆ ಸೇರಿದ ಸುಟ್ಟ ವಸ್ತುಗಳನ್ನು ಕುಟುಂಬಸ್ಥರಿಗೆ ವಿಮಾನಯಾನ ಸಂಸ್ಥೆ ನೀಡಿದೆ.
ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಸವ್ದನ್‌ಭಾಯ್ ಚೌಧರಿ ಅವರ ನವವಿವಾಹಿತ ಮಗ ಕಮಲೇಶ್ ಚೌಧರಿ ಮತ್ತು ಸೊಸೆ ಧಾಪುಬೆನ್ ಅವರು ಅಹಮದಾಬಾದ್ ವಿಮಾನ ದುರಂತದಲ್ಲಿ ಅಸುನೀಗಿದ್ದರು. ಆದರೆ ನವ ದಂಪತಿಗಳ ಮದುವೆ ಆಲ್ಬಂ ಮತ್ತು ಗುರುತಿಸ ಚೀಟಿ ಸೇರಿ ಕೆಲ ವಸ್ತುಗಳು ಅಪಘಾತದಲ್ಲಿ ಅರ್ಧ ಸುಟ್ಟಿದ್ದು, ಇದೀಗ ಇವುಗಳನ್ನು ಕುಟುಂಬಸ್ಥರಿಗೆ ಮರಳಿಸಲಾಗಿದೆ. ಪುತ್ರನ ವಸ್ತುಗಳನ್ನು ನೋಡಿ ಕುಟುಂಬಸ್ಥರಲ್ಲಿ ದುಃಖ ಮಡುಗಟ್ಟಿದೆ.
ಮೃತರ ವಸ್ತುಗಳು ಪೋಷಕರಿಗೆ ಹಸ್ತಾಂತರ ಪ್ರಕ್ರಿಯೆ: ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜೂನ್ 12, 2025 ರಂದು ಏರ್ ಇಂಡಿಯಾದ ಬೋಯಿಂಗ್ 787-8 ವಿಮಾನ ಹಾರಿದ ಸ್ವಲ್ಪ ಸಮಯದ ನಂತರ ಪತನಗೊಂಡಿತ್ತು. ಪರಿಣಾಮ ವಿಮಾನದಲ್ಲಿದ್ದ 229 ಪ್ರಯಾಣಿಕರು, 12 ಸಿಬ್ಬಂದಿ ಮತ್ತು ಕಟ್ಟಡದಲ್ಲಿದ್ದ 19 ಜನರು ಸೇರಿದಂತೆ 260 ಜನರು ಮೃತಪಟ್ಟಿದ್ದರು. ವಿಮಾನದ ಅವಶೇಷಗಳಲ್ಲಿ ಸಿಕ್ಕ ಮೃತರ ವಸ್ತುಗಳನ್ನು ಇತ್ತೀಚೆಗೆ ಅವರ ಕುಟುಂಬಸ್ಥರಿಗೆ ನೀಡುವ ಪ್ರಕ್ರಿಯೆ ನಡೆಯುತ್ತಿದೆ.
