ಉದಯವಾಹಿನಿ, ವಾಷಿಂಗ್ಟನ್​: ಇರಾನ್​ ಮೇಲೆ ಒತ್ತಡ ಹೇರಲು ಅಮೆರಿಕ ಎರಡನೇ ವಿಮಾನ ನೌಕೆಯನ್ನು ಕಳುಹಿಸಿದ್ದು, ಇರಾನ್​ ಸರ್ಕಾರ ಬದಲಾವಣೆಯು ಸಂಭವಿಸಬಹುದಾದ ಅತ್ಯುತ್ತಮ ಸಂಗತಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತಿಳಿಸಿದ್ದಾರೆ.
ಇರಾನ್‌ನ ಸರ್ಕಾರ ಉರುಳಿಸಲು ಟ್ರಂಪ್ ನೀಡಿರುವ ಅತ್ಯಂತ ಬಹಿರಂಗ ಕರೆ ಇದಾಗಿದೆ. ಟೆಹ್ರಾನ್ ಮೇಲೆ ಪರಮಾಣು ಕಾರ್ಯಕ್ರಮವನ್ನು ಮಿತಿಗೊಳಿಸಲು ಒಪ್ಪಂದ ಮಾಡಿಕೊಳ್ಳುವಂತೆ ಅಮೆರಿಕ ಒತ್ತಾಯಿಸುತ್ತಿರುವಾಗ ಈ ಹೇಳಿಕೆ ಬಂದಿದೆ.
ಕೆರೊಲಿನಾದ ಫೋರ್ಟ್ ಬ್ರಾಗ್ ಮಿಲಿಟರಿ ನೆಲೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಇರಾನ್​ ಆಡಳಿತ ಬದಲಾವಣೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಇದು ಆಗಬಹುದಾದ ಅತ್ಯುತ್ತಮ ವಿಷಯವಾಗಿದೆ ಎಂದರು.
ಇದೆ ವೇಳೆ ಇರಾನ್‌ನಲ್ಲಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯಿಂದ ಯಾರು ಅಧಿಕಾರ ವಹಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಟ್ರಂಪ್​, ಜನರಿದ್ದಾರೆ ಎಂದು ಹೇಳಿದರು.
ಇರಾನ್​ ಸರ್ಕಾರ ಬದಲಾವಣೆ ಕುರಿತು ಈ ಹಿಂದೆ ಕೂಡ ಟ್ರಂಪ್​ ಅನೇಕ ಕರೆ ನೀಡಿದ್ದು, ಇದು ಅವ್ಯವಸ್ಥೆಗೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದರು. ಅಲ್ಲದೇ ಅವರು, ಖಮೇನಿಗೂ ಅನೇಕ ಬೆದರಿಕೆ ಹಾಕಿದ್ದಾರೆ.
ಇದಕ್ಕೂ ಮೊದಲು ಶ್ವೇತಭವನದಲ್ಲಿ ಮಾತನಾಡಿದ ಟ್ರಂಪ್, ವಿಶ್ವದ ಅತಿದೊಡ್ಡ ಯುದ್ಧನೌಕೆಯಾದ ಯುಎಸ್ಎಸ್ ಜೆರಾಲ್ಡ್ ಆರ್. ಫೋರ್ಡ್, ಇರಾನ್ ಮೇಲೆ ಒತ್ತಡ ಹೆಚ್ಚಿಸಲು ಮಧ್ಯಪ್ರಾಚ್ಯಕ್ಕೆ ಶೀಘ್ರದಲ್ಲೇ ಹೊರಡಲಿದೆ. ನಾವು ಒಪ್ಪಂದ ಮಾಡಿಕೊಳ್ಳದಿದ್ದರೆ, ನಮಗೆ ಅದು ಅಗತ್ಯವಾಗಿದೆ ಎಂದಿದ್ದಾರೆ.
ಯುಎಸ್ಎಸ್ 12 ಹಡಗುಗಳು ಈಗಾಗಲೇ ಮಧ್ಯಪ್ರಾಚ್ಯದ ಸಾಗರದಲ್ಲಿದ್ದು, ಅದರಲ್ಲಿ ಅಬ್ರಹಾಂ ಲಿಂಕನ್ ಕೂಡ ಇದೆ. ಇದೀಗ ಅದರ ಜೊತೆಗೆ ಮತ್ತೊಂದು ದೈತ್ಯ ನೌಕೆ ಸೇರಿದೆ. ಈ ದೈತ್ಯ ಹಡಗು ಪ್ರಸ್ತುತ ಕೆರಿಬಿಯನ್‌ನಲ್ಲಿದೆ.ಇರಾನ್ ಪ್ರತಿಭಟನೆಗಳನ್ನು ಹತ್ತಿಕ್ಕಲು ಖಮೇನಿ ಸರ್ಕಾರ ಜನರ ಮೇಲೆ ದಮನ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ಸಾವಿರಾರು ಜನರನ್ನು ಕೊಂದಿದ್ದಾರೆ ಎಂದು ಹಲವು ಹಕ್ಕುಗಳ ಗುಂಪುಗಳು ಆರೋಪಿಸಿವೆ.
ಈ ನಡುವೆ ಟೆಹ್ರಾನ್‌ನ ಪರಮಾಣು ಕಾರ್ಯಕ್ರಮದ ಕುರಿತು ಇರಾನ್ ಮತ್ತು ಅಮೆರಿಕ ಒಮನ್‌ನಲ್ಲಿ ಮಾತುಕತೆಗಳನ್ನು ನಡೆಸಿವೆ. ಇಲ್ಲಿ ಯುರೇನಿಯಂ ಪುಷ್ಟೀಕರಣ ಕುರಿತು ಮಾತುಕತೆ ಆಡಿದ್ದು, ಒಪ್ಪಂದಕ್ಕೆ ಅಮೆರಿಕ ಒತ್ತಾಯಿಸಿದೆ. ಆದರೆ, ಇರಾನ್​ ಯುರೇನಿಯಂ ಪುಷ್ಟೀಕರಣ ಮುಂದುವರೆಸುತ್ತೇವೆ. ಅಮೆರಿಕದ ಬೆದರಿಕೆಗೆ ಬಗ್ಗಲ್ಲ ಎಂದು ಇರಾನ್​ ವಿದೇಶಾಂಗ ಸಚಿವ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!