ಉದಯವಾಹಿನಿ, ಢಾಕಾ (ಬಾಂಗ್ಲಾದೇಶ): 2024ರ ಬಾಂಗ್ಲಾ ದಂಗೆಯ ಬಳಿಕ ದೇಶದಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (ಬಿಎನ್‌ಪಿ) ಭರ್ಜರಿ ಜಯ ಸಾಧಿಸಿ, ಪಕ್ಷದ ನಾಯಕ ತಾರಿಕ್ ರೆಹಮಾನ್ ಪ್ರಧಾನಿಯಾಗಲು ಸಜ್ಜಾಗಿದ್ದಾರೆ.ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಬಿಎನ್‌ಪಿ ಮೈತ್ರಿಕೂಟ 212 ಸ್ಥಾನಗಳನ್ನು ಗೆದ್ದಿದ್ದರೆ , ಇಸ್ಲಾಮಿಸ್ಟ್ ನೇತೃತ್ವದ ಜಮಾತ್-ಇ-ಇಸ್ಲಾಮಿ ಮೈತ್ರಿಕೂಟ 77 ಸ್ಥಾನಗಳನ್ನು ಜಯಿಸಿದೆ.ಗೆಲುವಿನ ಬಳಿಕ ಮಾತನಾಡಿರುವ ಜಮಾತ್-ಇ-ಇಸ್ಲಾಮಿ ಮೈತ್ರಿಕೂಟ ಮತ ಎಣಿಕೆಯಲ್ಲಿ ಭಾರಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿದೆ. ಈ ಕುರಿತು ಯಾವ ಕ್ರಮ ತೆಗೆದುಕೊಳ್ಳುತ್ತದೆ ಎಂಬುದು ತಕ್ಷಣಕ್ಕೆ ಸ್ಪಷ್ಟಪಡಿಸಿಲ್ಲ.ಮತದಾನಕ್ಕೆ ಎರಡು ದಿನಗಳ ಮೊದಲು ಎಎಫ್‌ಪಿಗೆ ಮಾತನಾಡಿದ್ದ ಬಿಎನ್‌ಪಿ ಮುಖ್ಯಸ್ಥ ರೆಹಮಾನ್, ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ 15ವರ್ಷಗಳ ಸರ್ವಾಧಿಕಾರಿ ಆಳ್ವಿಕೆ ಅಂತ್ಯಗೊಂಡು ತಮ್ಮ ಪಕ್ಷವು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಚುನಾವಣೆಯಲ್ಲಿ ಭಾಗವಹಿಸದಂತೆ ಹಸೀನಾ ಅವರ ಅವಾಮಿ ಲೀಗ್ ಪಕ್ಷವನ್ನು ನಿಷೇಧಿಸಲಾಗಿತ್ತು.ರೆಹಮಾನ್ ಮತ್ತು ಬಿಎನ್‌ಪಿ ಪಕ್ಷದ ಈ ಐತಿಹಾಸಿಕ ಗೆಲುವಿಗೆ ಅಮೆರಿಕದ ರಾಯಭಾರ ಕಚೇರಿ ಅಭಿನಂದಿಸಿದರೆ, ಭಾರತ ಕೂಡ ರೆಹಮಾನ್ ಅವರ ಈ ನಿರ್ಣಾಯಕ ಗೆಲುವನ್ನು ಶ್ಲಾಘಿಸಿದೆ. ಬಾಂಗ್ಲಾದೇಶದೊಂದಿಗಿನ ಇತ್ತೀಚಿನ ಬಿಕ್ಕಟ್ಟಿನ ಸಂಬಂಧಗಳ ನಂತರ ಮಹತ್ವದ ಹೆಜ್ಜೆಯಾಗಿದೆ. ಬಿಎನ್‌ಪಿ ಗೆಲುವಿಗೆ ಚೀನಾ ಮತ್ತು ಪಾಕಿಸ್ತಾನಗಳು ಸಹ ಅಭಿನಂದಿಸಿವೆ.
ಸೋಲಿನ ಬಳಿಕ ಖಾರವಾಗಿ ಮಾತನಾಡಿದ ಜಮಾತ್ ಮುಖ್ಯಸ್ಥ ಶಫೀಕುರ್ ರೆಹಮಾನ್, ಫಲಿತಾಂಶ ಪ್ರಕ್ರಿಯೆಯಲ್ಲಿ ಅಕ್ರಮ ಕಂಡು ಬಂದಿದ್ದು ಈ ಕುರಿತು ಚುನಾವಣಾ ಆಯೋಗದಿಂದ ಪರಿಹಾರವನ್ನು ಕೋರುತ್ತೇವೆ .ಚುನಾವಣಾ ಪ್ರಕ್ರಿಯೆಯು ಅಸಂಗತತೆ ಮತ್ತು ಕಟ್ಟುಕಥೆಗಳನ್ನು ಹೊಂದಿದೆ ಎಂದು ಆರೋಪಿಸಿದ್ದಾರೆ. ಮತದಾನ ನಡೆದ 300 ಕ್ಷೇತ್ರಗಳಲ್ಲಿ 299 ಕ್ಷೇತ್ರಗಳಲ್ಲಿ ಶೇ. 59 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಮತದಾನಕ್ಕೆ ಮುನ್ನ ದೇಶಾದ್ಯಂತ ಭದ್ರತಾ ಪಡೆಗಳ ಭಾರಿ ಭದ್ರತೆಯನ್ನು ನಿಯೋಜಿಸಲಾಗಿತ್ತು. ಚುನಾವಣಾ ಪ್ರಚಾರದ ಸಮಯದಲ್ಲಿ ನಡೆದ ರಾಜಕೀಯ ಘರ್ಷಣೆಗಳಲ್ಲಿ ಐದು ಜನರು ಸಾವನ್ನಪ್ಪಿ, 600 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು ಎಂದು ಪೊಲೀಸ್ ದಾಖಲೆಗಳು ತಿಳಿಸಿವೆ.
