ಉದಯವಾಹಿನಿ: ಅಂತರರಾಷ್ಟ್ರೀಯ ರಾಜಕೀಯದಲ್ಲಿ ಚೀನಾ ಮತ್ತು ರಷ್ಯಾ ಅಮೆರಿಕ ವಿರುದ್ಧ ಒಂದಾಗಿ ನಿಂತಿರುವಂತೆ ಕಾಣಿಸುತ್ತವೆ. ಇಬ್ಬರೂ ರಾಷ್ಟ್ರಾಧ್ಯಕ್ಷರು ಹಲವು ವೇದಿಕೆಗಳಲ್ಲಿ ಒಗ್ಗಟ್ಟಿನ ಸಂದೇಶ ನೀಡುತ್ತಾರೆ. ಆದರೆ ವಾಸ್ತವದಲ್ಲಿ ಮಧ್ಯ ಏಷ್ಯಾ ಪ್ರದೇಶದಲ್ಲಿ ಶಕ್ತಿಸಮತೋಲನ ಬದಲಾಗುತ್ತಿದೆ ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ. ಒಮ್ಮೆ ರಷ್ಯಾದ ಪ್ರಭಾವ ವಲಯವಾಗಿದ್ದ ಮಧ್ಯ ಏಷ್ಯಾದ ರಾಷ್ಟ್ರಗಳಾದ ಕಜಕಿಸ್ತಾನ್, ಕಿರ್ಗಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ತುರ್ಕಮೆನಿಸ್ತಾನ್ ಗಳಲ್ಲಿ ಸ್ಮಾರ್ಟ್ ಸಿಟಿ ಯೋಜನೆಗಳು ವೇಗವಾಗಿ ಸಾಗುತ್ತಿವೆ. ಈ ಯೋಜನೆಗಳಲ್ಲಿ ಚೀನಾದ ಕಂಪನಿಗಳು ಪ್ರಮುಖ ಪಾತ್ರವಹಿಸುತ್ತಿರುವುದು ಗಮನಸೆಳೆಯುತ್ತಿದೆ.ಕಿರ್ಗಿಸ್ತಾನ್‌ನ ಅಸ್ಮಾನ್ ಸಿಟಿ, ಕಝಾಕಿಸ್ತಾನದ ಅಲಾಟೌ, ಉಜ್ಬೇಕಿಸ್ತಾನದ ನ್ಯೂ ತಾಷ್ಕೆಂಟ್ ಮತ್ತು ತುರ್ಕಮೆನಿಸ್ತಾನದ ಅರ್ಕಾಡಾಗ್ ನಗರಗಳ ನಿರ್ಮಾಣ ಕಾರ್ಯಗಳು ಭಾರೀ ಹೂಡಿಕೆಯಿಂದ ನಡೆಯುತ್ತಿವೆ. ಆರಂಭಿಕ ಹಂತದಲ್ಲಿ ಸುಮಾರು 2.5 ಲಕ್ಷ ಜನರಿಗೆ ವಸತಿ ಕಲ್ಪಿಸುವ ಗುರಿ ಹೊಂದಿರುವ ಈ ನಗರಗಳು ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗುತ್ತಿವೆ. ಡಿಜಿಟಲ್ ವ್ಯವಸ್ಥೆ, ಹಸಿರು ಶಕ್ತಿ, ಸ್ಮಾರ್ಟ್ ಟ್ರಾಫಿಕ್ ನಿರ್ವಹಣೆ ಮೊದಲಾದ ಆಧುನಿಕ ಸೌಲಭ್ಯಗಳು ಇದರಲ್ಲಿ ಸೇರಿವೆ.

ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ 2050ರೊಳಗೆ ಮಧ್ಯ ಏಷ್ಯಾದ ಜನಸಂಖ್ಯೆ 110 ಮಿಲಿಯನ್ ತಲುಪಬಹುದು. ಹಳೆಯ ಸೋವಿಯತ್ ವ್ಯವಸ್ಥೆ ಈ ಬೆಳವಣಿಗೆಯನ್ನು ನಿಭಾಯಿಸಲು ಸಾಧ್ಯವಿಲ್ಲವೆಂದು ತಜ್ಞರು ಅಭಿಪ್ರಾಯಪಡುತ್ತಾರೆ. ಇದೇ ಸಂದರ್ಭದಲ್ಲಿ ಚೀನಾ ತನ್ನ ಹೂಡಿಕೆ ಮತ್ತು ತಂತ್ರಜ್ಞಾನದಿಂದ ಈ ದೇಶಗಳೊಂದಿಗೆ ಸಂಬಂಧ ಬಲಪಡಿಸುತ್ತಿದೆ. ಇನ್ನೊಂದೆಡೆ, ಉಕ್ರೇನ್ ಯುದ್ಧದ ನಂತರ ರಷ್ಯಾದ ಆರ್ಥಿಕ ಸ್ಥಿತಿ ದುರ್ಬಲಗೊಂಡಿದೆ ಎಂಬ ವಿಶ್ಲೇಷಣೆ ಇದೆ. ದೊಡ್ಡ ಮೂಲಸೌಕರ್ಯ ಯೋಜನೆಗಳಲ್ಲಿ ರಷ್ಯಾದ ಸ್ಪಷ್ಟ ಉಪಸ್ಥಿತಿ ಕಾಣಿಸದಿರುವುದು ಚರ್ಚೆಗೆ ಗ್ರಾಸವಾಗಿದೆ. ಹೀಗಾಗಿ, ಚೀನಾ ಬೆಂಬಲದ ಹೆಸರಿನಲ್ಲಿ ಮಧ್ಯ ಏಷ್ಯಾದಲ್ಲಿ ತನ್ನ ದೀರ್ಘಕಾಲಿಕ ಪ್ರಭಾವ ವಿಸ್ತರಿಸುತ್ತಿದೆಯೇ ಎಂಬ ಪ್ರಶ್ನೆ ಜಾಗತಿಕ ರಾಜಕೀಯದಲ್ಲಿ ಮೂಡಿದೆ.

Leave a Reply

Your email address will not be published. Required fields are marked *

error: Content is protected !!