ಉದಯವಾಹಿನಿ, ಬದಲಾಗುತ್ತಿರುವ ಆಹಾರ ಕ್ರಮದ ಭಾಗವಾಗಿ ಹೆಚ್ಚಿನ ಜನರು ಜೋಳದ ರೊಟ್ಟಿಗಳನ್ನು ಸೇವಿಸುತ್ತಾರೆ. ಅನ್ನಕ್ಕಿಂತಲೂ ಜೋಳದ ರೊಟ್ಟಿಗಳನ್ನು ಹೆಚ್ಚಾಗಿ ಸೇವಿಸುತ್ತಾರೆ. ಇದಕ್ಕಾಗಿಯೇ ನಾವು ನಿಮಗಾಗಿ ಎಳ್ಳು ಹಚ್ಚಿದ ಜೋಳದ ರೊಟ್ಟಿ ರೆಸಿಪಿಯನ್ನು ತಂದಿದ್ದೇವೆ. ಜೋಳದ ರೊಟ್ಟಿಗಳನ್ನು ಮನೆಯಲ್ಲಿಯೇ ಅತ್ಯಂತ ಸರಳವಾಗಿ ಮಾಡಬಹುದು. ಈ ವಿಧಾನಗಳನ್ನು ಬಳಸಿ ಜೋಳದ ರೊಟ್ಟಿಗಳನ್ನು ತಯಾರಿಸಿದರೆ, ಇವುಗಳು ಮುರಿಯುವ ಭಯವಿಲ್ಲ. ಕೆಲವು ಗಂಟೆಗಳು ಕಳೆದರೂ ಕೂಡ ತುಂಬಾ ಮೃದುವಾಗಿರುತ್ತವೆ. ಇವುಗಳನ್ನು ಚಪಾತಿ ಮಣೆಯ ಮೇಲೆ ಬಹಳ ಸುಲಭವಾಗಿ ತಯಾರಿಸಬಹುದು.
ನೀವು ಜೋಳದ ರೊಟ್ಟಿಗಳನ್ನು ಮೊದಲ ಬಾರಿಗೆ ಮಾಡಿದರೂ ಸಹ ಇವು ಪರಿಪೂರ್ಣವಾಗಿ ಹೊರಬರುತ್ತವೆ. ಮನೆಯಲ್ಲಿ ಈ ಜೋಳದ ರೊಟ್ಟಿಗಳನ್ನು ತುಂಬಾ ಖುಷಿಯಿಂದ ತಿನ್ನುತ್ತಾರೆ. ನೀವು ಈ ರೊಟ್ಟಿಗಳನ್ನು ಮಧ್ಯಾಹ್ನದ ಊಟ ಇಲ್ಲವೇ ರಾತ್ರಿ ಊಟದಲ್ಲಿ ಸೇವನೆ ಮಾಡಬಹುದು. ಯಾವುದಾದರೂ ಪಲ್ಯಯೊಂದಿಗೆ ಸೇವಿಸಿದರೆ ಸಖತ್ ಆಗಿರುತ್ತದೆ. ಈ ಜೋಳದ ರೊಟ್ಟಿಯನ್ನು ಸಸ್ಯಾಹಾರ ಇಲ್ಲವೇ ಮಾಂಸಾಹಾರ ಕರಿಯಲ್ಲಿ ಸಂಯೋಜನೆಯಾಗಿ ಸವಿಯಬಹುದು. ರುಚಿಕರವಾದ ಎಳ್ಳು ಹಚ್ಚಿದ ಜೋಳ ರೊಟ್ಟಿಗಳನ್ನು ತಯಾರಿಸುವುದು ಹೇಗೆ ಎಂಬುದನ್ನು ತಿಳಿಯೋಣ.
ಜೋಳದ ಹಿಟ್ಟು – ಒಂದು ಕಪ್
ಉಪ್ಪು – ಸ್ವಲ್ಪ
ಎಳ್ಳು – 3 ಟೀಸ್ಪೂನ್
ಸೂಪರ್ ಸಾಫ್ಟ್ ಆಗಿರುವ ಎಳ್ಳು ಹಚ್ಚಿದ ಜೋಳದ ರೊಟ್ಟಿ ಸಿದ್ಧಪಡಿಸಲು ಮೊದಲಿಗೆ, ಒಲೆ ಆನ್ ಮಾಡಿ ಎರಡು ಕಪ್ ನೀರು ಹಾಗೂ ಸ್ವಲ್ಪ ಉಪ್ಪು ಒಂದು ಕಡಾಯಿಯಲ್ಲಿ ಸೇರಿಸಿ ಸ್ವಲ್ಪ ಹೊತ್ತು ಕುದಿಸಿದ ಬಳಿಕ ಒಲೆ ಆಫ್ ಮಾಡಿ.
ಬಳಿಕ ಒಂದು ಕಪ್ ಜೋಳದ ಹಿಟ್ಟು ಮತ್ತು ಸ್ವಲ್ಪ ಬಿಸಿ ನೀರನ್ನು ಒಂದು ಪಾತ್ರೆಯಲ್ಲಿ ಸುರಿಯಿರಿ, ಅದನ್ನು ಒಂದು ಲಟ್ಟಣಿಗೆಯೊಂದಿಗೆ ಮಿಶ್ರಣ ಮಾಡಿ.
ಇದೀಗ ಸ್ವಲ್ಪ ತಣ್ಣೀರು ಸೇರಿಸಿ ಹಿಟ್ಟನ್ನು ಮಿಶ್ರಣ ಮಾಡಬೇಕಾಗುತ್ತದೆ. ಬಳಿಕ ಹಿಟ್ಟಿನ ಸಣ್ಣ ಉಂಡೆಗಳನ್ನು ಮಾಡಿ, ಅದು ಒಣಗದಂತೆ ಒದ್ದೆಯಾದ ಬಟ್ಟೆಯಿಂದ ಮುಚ್ಚಿ ಪಕ್ಕಕ್ಕೆ ಇಡಿ. ಇನ್ನೊಂದು ಬಟ್ಟಲಿನಲ್ಲಿ ಮೂರು ಚಮಚ ಎಳ್ಳು ಸೇರಿಸಿ. ಈಗ, ಒಂದು ಉಂಡೆ ಹಿಟ್ಟನ್ನು ಎಳ್ಳಿನಲ್ಲಿ ಅದ್ದಿ ಚಪಾತಿ ಮಣೆಯ ಮೇಲೆ ತೆಗೆದುಕೊಂಡು, ಒಣ ಹಿಟ್ಟನ್ನು ಸಿಂಪಡಿಸಿ ಹಾಗೂ ಚಪಾತಿಯ ಗಾತ್ರದಲ್ಲಿ ಸ್ವಲ್ಪ ದಪ್ಪವಾಗುವಂತೆ ಲತ್ತುಗುಣಿಯಿಂದ ಲಘುವಾಗಿ ಲಟ್ಟಿಸಿಕೊಳ್ಳಬೇಕಾಗುತ್ತದೆ.
ಮತ್ತೊಂದೆಡೆ, ಒಲೆ ಆನ್ ಮಾಡಿ ತಯಾರಾದ ರೊಟ್ಟಿಯನ್ನು ಒಂದು ಪ್ಯಾನ್‌ನಲ್ಲಿ ಹಾಕಿ, ಒಂದು 30 ಸೆಕೆಂಡುಗಳ ಕಾಲ ಅಲ್ಲಿಯೇ ಬಿಡಿ.
ಈ ರೊಟ್ಟಿಯು ಬೇಯಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಇವುಗಳನ್ನು ಬೇಗನೆ ಬೇಯಿಸಿದರೆ, ಬಣ್ಣ ಕಳೆದುಕೊಳ್ಳುತ್ತವೆ. ಆದರೆ, ಒಳಗಿನ ಹಿಟ್ಟು ಬೇಯುವುದಿಲ್ಲ. ಇದರಿಂದ ನೀವು ಇವುಗಳನ್ನು ನಿಧಾನವಾಗಿ ಸುಡಬೇಕು. ಇವು ಸರಿಯಾಗಿ ಬೇಯಿಸಿದರೆ ಉಬ್ಬುತ್ತವೆ.
