ಉದಯವಾಹಿನಿ, ಜೈಪುರ,: ʼಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕʼ ಎಂಬ ಗಾದೆ ಹಳೆಯದಾಯಿತು. ಇದೀಗ ಸಣ್ಣ-ಪುಟ್ಟ ವಿಚಾರಕ್ಕೆ ಜಗಳವಾದರೂ ಪತಿ-ಪತ್ನಿ ಕೋರ್ಟ್ ಮೆಟ್ಟಿಲೇರಿ ವಿಚ್ಛೇದನ ಪಡೆದುಕೊಳ್ಳುತ್ತಿರುವ ಸಂಖ್ಯೆ ಹೆಚ್ಚುತ್ತಿದೆ. ಮದುವೆಯಾದ ದಿನ ಅಥವಾ ಮಾರನೇ ದಿನ, ಒಂದು ತಿಂಗಳ ನಂತರ ಹೀಗೆ ವಿಚ್ಛೇದನವಾಗುತ್ತಿರುವುದು ಸಾಮಾನ್ಯವಾಗುತ್ತಿದೆ. ಆದರೆ ಬಹಳಷ್ಟು ವರ್ಷಗಳ ಕಾಲ ದಾಂಪತ್ಯ ಮಾಡಿ ದೂರವಾಗುವುದು ತೀರಾ ಅಪರೂಪ. ಕೇವಲ ಸೆಲೆಬ್ರಿಟಿಗಳು ಈ ರೀತಿ ದೂರವಾಗುತ್ತಾರೆ. ಇದೀಗ ಇಲ್ಲೊಂದೆಡೆ ದಂಪತಿಯ 58 ವರ್ಷದ ದಾಂಪತ್ಯ ಜೀವನಕ್ಕೆ ವಿಚ್ಛೇದನ ನೀಡಲು ಸಾಧ್ಯವಿಲ್ಲ ಎಂದು ರಾಜಸ್ಥಾನ ಹೈಕೋರ್ಟ್ ತೀರ್ಪು ನೀಡಿದೆ. ಕ್ಷುಲ್ಲಕ ಕಿರಿಕಿರಿಗಳು, ಜಗಳಗಳು ಮತ್ತು ದಂಪತಿಯ ನಡುವೆ ಸಾಮಾನ್ಯವಾಗಿರುವ ವಾಗ್ಯುದ್ಧಕ್ಕೆ ವಿಚ್ಛೇದನ ನೀಡಲು ಸಾಧ್ಯವಿಲ್ಲ ಎಂದು ಹೇಳುತ್ತಾ, ರಾಜಸ್ಥಾನ ಹೈಕೋರ್ಟ್‌ನ ಜೈಪುರ ಪೀಠವು, 58 ವರ್ಷಗಳ ದಾಂಪತ್ಯವನ್ನು ಕೊನೆಗಾಣಿಸಲು ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಅನಿಲ್ ಕುಮಾರ್ ಉಪ್ಮಾನ್ ಮತ್ತು ಸುದೇಶ್ ಬನ್ಸಾಲ್ ಅವರನ್ನೊಳಗೊಂಡ ವಿಭಾಗೀಯ ಪೀಠವು ತೀರ್ಪು ನೀಡಿದೆ. ಪತಿಯ ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿದ ಭರತ್‌ಪುರದ ಕುಟುಂಬ ನ್ಯಾಯಾಲಯದ 2019ರ ಆದೇಶವನ್ನು ಎತ್ತಿಹಿಡಿದಿದೆ.
ಕುಟುಂಬದೊಳಗಿನ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳು ಮತ್ತು ಆಸ್ತಿ ವಿವಾದಗಳು ದೀರ್ಘ ಕಾಲದ ದಾಂಪತ್ಯವನ್ನು ಕೊನೆಗೊಳಿಸುವುದನ್ನು ಸಮರ್ಥಿಸುವುದಿಲ್ಲ. ಅದರಲ್ಲೂ ವಿಶೇಷವಾಗಿ ವೃದ್ಧಾಪ್ಯದಲ್ಲಿ ವಿಚ್ಛೇದನ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.ಎಲ್ಲ ಕುಟುಂಬಗಳಲ್ಲೂ ದಿನನಿತ್ಯದ ಜೀವನದಲ್ಲಿ ಕ್ಷುಲ್ಲಕ ಕಿರಿಕಿರಿಗಳು, ಜಗಳಗಳು ಸಾಮಾನ್ಯವಾಗಿದೆ. ಹೀಗಾಗಿ ಇದಕ್ಕೆಲ್ಲ ವಿಚ್ಛೇದನ ನೀಡಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ. ದಂಪತಿ 1967ರಲ್ಲಿ ವಿವಾಹವಾದರು. ಯಾವುದೇ ವಿವಾದವಿಲ್ಲದೆ 2013ರವರೆಗೆ ಒಟ್ಟಿಗೆ ವಾಸಿಸುತ್ತಿದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಹೆಣ್ಣು ಮಗಳಿದ್ದಾರೆ. ಅವರೆಲ್ಲರಿಗೂ ಮದುವೆಯೂ ಆಗಿದೆ.
