ಉದಯವಾಹಿನಿ, ಮ್ಯೂನಿಚ್‌: ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರಿಗೆ ಗುರುತಿನ ಚೀಟಿ ತೋರಿಸುವಂತೆ ಭದ್ರತಾ ಸಿಬ್ಬಂದಿ ತಡೆದ ಘಟನೆ ಜರ್ಮನಿಯ ಮ್ಯೂನಿಚ್‌ನಲ್ಲಿ ನಡೆದಿದೆ. ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಭಾಗವಹಿಸಲು ಬಂದಿದ್ದ ಅವರನ್ನು ಭದ್ರತಾ ಸಿಬ್ಬಂದಿ ತಡೆದಿದ್ದಾರೆ. ಗುರುತು ಚೀಟಿ ತೋರಿಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ಗುರುತು ಚೀಟಿಯನ್ನು ಸ್ಪಷ್ಟವಾಗಿ ಕಾಣುವಂತೆ ಕುತ್ತಿಗೆಗೆ ಹಾಕಿಕೊಳ್ಳಬೇಕು ಎಂದು ಸಮ್ಮೇಳನದ ಭದ್ರತಾ ಅಧಿಕಾರಿ ಆದೇಶಿಸಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಭಾಗವಹಿಸಲು ಆಗಮಿಸಿದ ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರನ್ನು ಪ್ರವೇಶ ದ್ವಾರದಲ್ಲಿ ತಡೆದ ಭದ್ರತಾ ಅಧಿಕಾರಿಗಳು ಗುರುತು ಚೀಟಿ ತೋರಿಸುವಂತೆ ಕೇಳಿದ್ದಾರೆ. ಇದರ ವಿಡಿಯೊ ವೈರಲ್ ಆಗಿದೆ. ಈ ವಿಡಿಯೊದಲ್ಲಿ ಭದ್ರತಾ ಅಧಿಕಾರಿಗಳು ಅಸಿಮ್ ಮುನೀರ್ ಅವರನ್ನು ತಡೆದು ಪ್ರಶ್ನಿಸುವುದನ್ನು ಕಾಣಬಹುದು. ಭದ್ರತಾ ಅಧಿಕಾರಿ ಅವರ ಹೆಸರಿನ ಬ್ಯಾಡ್ಜ್ ಅನ್ನು ಟ್ಯಾಪ್ ಮಾಡಿದ ಮೇಲೆ ಅವರ ಕುತ್ತಿಗೆಯಲ್ಲಿ ನೇತಾಡುತ್ತಿದ್ದ ಐಡಿ ಕಾರ್ಡ್ ಅನ್ನು ತೋರಿಸುತ್ತಾ, ನೀವು ಅದನ್ನು ತಿರುಗಿಸಬಹುದೇ? ಎಂದು ಕೇಳಿದ್ದಾರೆ.

ಭದ್ರತಾ ಅಧಿಕಾರಿ ಮಾತಿಗೆ ಉತ್ತರಿಸದ ಅಸಿಮ್‌ ಮುನೀರ್‌ ಮುನ್ನಡೆದರು. ಆದರೆ ಅವರ ಸಹಾಯಕ ಗುರುತಿನ ಚೀಟಿ ತೋರಿಸಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಸಂವಾದ ಮತ್ತು ಸಂಘರ್ಷ ಪರಿಹಾರಕ್ಕಾಗಿ ಹಾಗೂ ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತಾ ಸವಾಲುಗಳನ್ನು ಎದುರಿಸಲು ವಾರ್ಷಿಕವಾಗಿ ನಡೆಯುವ ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ವಿಶ್ವ ನಾಯಕರು, ರಾಜತಾಂತ್ರಿಕರು ಮತ್ತು ಭದ್ರತಾ ತಜ್ಞರು ಪಾಲ್ಗೊಳ್ಳುತ್ತಾರೆ. ಅಮೆರಿಕದಲ್ಲಿ ಪರಮಾಣು ಬೆದರಿಕೆ ಹಾಕಿದ್ದ ಅಸಿಮ್‌ ಮುನೀರ್‌ಗೆ ಇದೇ ಸಮ್ಮೇಳನದಲ್ಲಿ ಕಳೆದ ವರ್ಷ ಛೀಮಾರಿ ಹಾಕಲಾಗಿತ್ತು.

Leave a Reply

Your email address will not be published. Required fields are marked *

error: Content is protected !!