ಉದಯವಾಹಿನಿ, ಅಮರಾವತಿ(ಆಂಧ್ರ ಪ್ರದೇಶ): ಆಂಧ್ರ ಪ್ರದೇಶದ ನೂತನ ರಾಜಧಾನಿ ಅಮರಾವತಿ, ಗ್ರೀನ್ಫೀಲ್ಡ್ ಯೋಜನೆ, ಸಂಜೀವಿನಿ ಯೋಜನೆ ಮತ್ತು ವಾಟ್ಸ್ಆ್ಯಪ್ ಆಡಳಿತ ಸೇರಿದಂತೆ ರಾಜ್ಯದಲ್ಲಿ ನಡೆಯುತ್ತಿರುವ ಹಲವು ಸರ್ಕಾರಿ ಯೋಜನೆಗಳ ಕುರಿತು ಸಿಎಂ ಚಂದ್ರಬಾಬು ನಾಯ್ಡು ಅವರು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ಗೇಟ್ಸ್ ಅವರಿಗೆ ಮಾಹಿತಿ ನೀಡಿದ್ದಾರೆ.
ರಾಜ್ಯ ಸಚಿವಾಲಯಕ್ಕೆ ಭೇಟಿ ನೀಡಿದ ಗೇಟ್ಸ್, ನೈಜ ಸಮಯದ ಆಡಳಿತ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಬಳಕೆಯನ್ನು ಗಮನಿಸಿದರು. ಈ ವೇಳೆ ಸಿಎಂ ನಾಯ್ಡು, ನಾಗರಿಕ ಸೇವೆಗಳನ್ನು ಹೇಗೆ ಜನರಿಗೆ ವೇಗವಾಗಿ ತಲುಪಿಸಲಾಗುತ್ತಿದೆ. ನೈಜ ಸಮಯದ ಆಡಳಿತದ ಮೂಲಕ ಸಾಧಿಸಿದ ಫಲಿತಾಂಶಗಳ ಕುರಿತು ವಿವರಿಸಿದರು.ರಾಜ್ಯ ಸರ್ಕಾರ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವೇರ್ 2.0 ಪ್ಲಾಟ್‌ಫಾರ್ಮ್ ಮೂಲಕ ನೈಜ ಸಮಯದಲ್ಲಿ ಮಾಹಿತಿ ಪಡೆಯುತ್ತಿದೆ ಎಂದು ಸಿಎಂ ತಿಳಿಸಿದರು.ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಮೇಲೆ ಹೇಗೆ ಸಾರ್ವಜನಿಕ ಅಭಿಪ್ರಾಯವನ್ನು ಸಂಗ್ರಹಿಸಲಾಗುತ್ತಿದೆ, ಪ್ರಮುಖ ಪ್ರದರ್ಶನ ಸೂಚ್ಯಂಕವಾಗಿ ಜಿಎಸ್ಡಿಪಿ ಬೆಳವಣಿಗೆಯನ್ನು ನಿರಂತರವಾಗಿ ಅಂದಾಜು ಮಾಡಲಾಗುತ್ತಿದೆ ಎಂಬುದನ್ನು ಸಿಎಂ ತಿಳಿಸಿದರು.ಆಸ್ತಿಗಳ ದಾಖಲೆಗಳನ್ನು ಹೇಗೆ ಸಂರಕ್ಷಿಸಲಾಗಿದೆ ಎಂಬ ಕುರಿತು ವಿವರ ನೀಡಿದ ನಾಯ್ಡು, ಭೂ ದಾಖಲೆಗಳನ್ನು ರಕ್ಷಿಸಲು ಬ್ಲಾಕ್ಚೈನ್ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದ್ದು, ಇದರಲ್ಲಿ ಪಾರದರ್ಶಕತೆಗಾಗಿ ಕ್ಯೂಆರ್ ಕೋಡ್ ಅಳವಡಿಕೆಯ ಕುರಿತು ಹೇಳಿದರು. ಹಾಗೆಯೇ ಜಿಎಸ್‌ಟಿ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ತೆರಿಗೆ ಸಂಗ್ರಹ ಹೆಚ್ಚಾಗಿದೆ ಎಂದರು.ಚಿತ್ತೂರು ಜಿಲ್ಲೆಯ ಕುಪ್ಪಂನಲ್ಲಿ ಗೇಟ್ಸ್ ಫೌಂಡೇಶನ್ ನಡೆಸುತ್ತಿರುವ ಆರೋಗ್ಯ ದಾಖಲೆ ಕುರಿತ ಕಾರ್ಯಕ್ರಮವಾದ ಸಂಜೀವಿನಿ ಬಗ್ಗೆ ಗೇಟ್ಸ್‌ಗೆ ವಿವರಣೆ ಪಡೆದರು. ರಕ್ತದೊತ್ತಡ, ಮಧುಮೇಹ ಮತ್ತು ಇತರೆ ವೈದ್ಯಕೀಯ ಪರೀಕ್ಷೆಗಳ ದಾಖಲಾತಿಗಳನ್ನು ಹೇಗೆ ನಡೆಸಲಾಗುತ್ತಿದೆ ಎಂಬುದನ್ನೂ ಪರೀಕ್ಷಿಸಿದರು. ಸಂಜೀವಿನಿ ಯೋಜನೆಯನ್ನು ಉತ್ತಮವಾಗಿ ಕಾರ್ಯಾಚರಣೆ ನಡೆಸುತ್ತಿರುವ ಕುರಿತು ಪ್ರಶಂಸಿಸಿದರು.ಎಐ ಬಳಕೆ ಮೂಲಕ ಜನರ ಆರೋಗ್ಯ ಸೇವೆಯಲ್ಲಿ ಸುಧಾರಣೆ ಕಂಡಿದೆ. ಬಯೋ ಡಿಸೈನ್ ಮೂಲಕ ಆರೋಗ್ಯ ಸೇವೆಯನ್ನು ವಿತರಿಸಲಾಗುತ್ತಿದೆ ಎಂದು ನಾಯ್ಡು ತಿಳಿಸಿದರು.ಅಮರಾವತಿಯಲ್ಲಿ ಬಡವರು ಕೂಡ ಉತ್ತಮವಾದ ಡಯಾಗ್ನಸ್ಟಿಕ್ ಪರೀಕ್ಷೆಗಳ ಪ್ರಯೋಜನ ಪಡೆಯುತ್ತಿದ್ದು, ಈ ಮೂಲಕ ರಾಜಧಾನಿಯಲ್ಲಿನ ಗ್ರೀನ್ಫೀಲ್ಡ್ ಕಾರ್ಯಾಚರಣೆ ನಿರ್ಮಾಣ ಮಾಡಲಾಗುತ್ತಿದೆ ಎಂಬ ಕುರಿತು ವಿವರಿಸಿದ್ದಾರೆ.
