ಉದಯವಾಹಿನಿ, ನವದೆಹಲಿ: ಕೇರಳದ ಶಬರಿಮಲೆ ದೇವಸ್ಥಾನ, ಮಸೀದಿಗಳು, ಇತರ ಧಾರ್ಮಿಕ ಸ್ಥಳಗಳು ಮತ್ತು ಧರ್ಮಗಳಲ್ಲಿ ಮಹಿಳಾ ತಾರತಮ್ಯ ಸಂಬಂಧಿಸಿದ ಅರ್ಜಿಗಳ ಅಂತಿಮ ವಿಚಾರಣೆಯನ್ನು 9 ನ್ಯಾಯಾಧೀಶರ ಪೀಠ ಪ್ರಾರಂಭಿಸಲಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ತಿಳಿಸಿತು.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ.ಪಾಂಚೋಲಿ ಅವರಿದ್ದ ಪೀಠವು ಈ ನಿರ್ಣಯ ತೆಗೆದುಕೊಂಡಿತು. ಸುಪ್ರೀಂ ಕೋರ್ಟ್ ಸಿಜೆಐ ನೇತೃತ್ವದಲ್ಲಿ ಒಂಬತ್ತು ಜಡ್ಜ್ಗಳನ್ನು ನೇಮಿಸಲಾಗುವುದು. ಅವರು ಏಪ್ರಿಲ್ 7ರಿಂದ ಈ ಕುರಿತ ಅರ್ಜಿಗಳ ವಿಚಾರಣೆ ನಡೆಸಲಿದ್ದಾರೆ ಎಂದಿತು.
ವಿಚಾರಣೆ ಏಪ್ರಿಲ್ 22ರಂದು ಮುಕ್ತಾಯಗೊಳ್ಳುವ ಸಾಧ್ಯತೆಯಿದೆ. ಮಾರ್ಚ್ 14ರಂದು ಅಥವಾ ಅದಕ್ಕೂ ಮೊದಲು ತಮ್ಮ ಲಿಖಿತ ದೂರುಗಳನ್ನು ಸಲ್ಲಿಸುವಂತೆ ಪೀಠವು ಎಲ್ಲ ಪಕ್ಷಗಾರರಿಗೆ ಸೂಚಿಸಿತು.
ಶಬರಿಮಲೆ ಸುಪ್ರೀಂ ತೀರ್ಪಿಗೆ ಕೇಂದ್ರ ವಿರೋಧ: ಎಲ್ಲಾ ವಯೋಮಾನದ ಮಹಿಳೆಯರಿಗೆ ಶಬರಿಮಲೆ ದೇಗುಲ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂಬ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಪುನರ್‌ಪರಿಶೀಲನೆ ನಡೆಸಲು ಕೋರಿ ಸಲ್ಲಿಸಿರುವ ಅರ್ಜಿಗೆ ಕೇಂದ್ರ ಸರ್ಕಾರ ಬೆಂಬಲ ನೀಡಿದ್ದಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.
ಶಬರಿಮಲೆ ತೀರ್ಪನ್ನು ಪುನರ್‌ಪರಿಶೀಲನೆ ನಡೆಸಲು ಸಲ್ಲಿಸಲಾದ ಅರ್ಜಿದಾರರ ನೋಡಲ್ ವಕೀಲರನ್ನಾಗಿ ಕೃಷ್ಣ ಕುಮಾರ್ ಸಿಂಗ್, ಪುನರ್‌ಪರಿಶೀಲನೆ ವಿರುದ್ಧದ ಪಕ್ಷಗಾರರ ಪರ ನೋಡಲ್ ವಕೀಲರನ್ನಾಗಿ ಶಾಶ್ವತಿ ಪರಿ ಅವರನ್ನು ಕೋರ್ಟ್ ಇದೇ ವೇಳೆ ನೇಮಿಸಿತು. ಅಲ್ಲದೆ, ಹಿರಿಯ ವಕೀಲರಾದ ಶಿವಂ ಸಿಂಗ್ ಮತ್ತು ಕೆ.ಪರಮೇಶ್ವರ್ ಅವರನ್ನು ಅಮಿಕಸ್ ಕ್ಯೂರಿಗಳನ್ನಾಗಿ ನೇಮಿಸಿತು.
ಪರ-ವಿರೋಧ ಅರ್ಜಿದಾರರ ವಿಚಾರಣೆ: “ಒಂಬತ್ತು ನ್ಯಾಯಾಧೀಶರ ಪೀಠ ಶಬರಿಮಲೆ ಕುರಿತು ಸುಪ್ರೀಂ ತೀರ್ಪಿನ ಪುನರ್‌ಪರಿಶೀಲನೆಯನ್ನು 2026ರ ಏಪ್ರಿಲ್ 7ರಂದು ಬೆಳಿಗ್ಗೆ 10:30ಕ್ಕೆ ಪ್ರಾರಂಭಿಸಲಿದೆ. ಪುನರ್‌ಪರಿಶೀಲನೆ ಪರ ಅರ್ಜಿದಾರರು ಹಾಗೂ ಅವರನ್ನು ಬೆಂಬಲಿಸುವವರನ್ನು ಏಪ್ರಿಲ್ 7 ರಿಂದ ಏಪ್ರಿಲ್ 9ರವರೆಗೆ ವಿಚಾರಣೆ ನಡೆಸಲಾಗುವುದು. ಇದಕ್ಕೆ ವಿರುದ್ಧವಾದ ಅರ್ಜಿದಾರರನ್ನು ಏಪ್ರಿಲ್ 14ರಿಂದ ಏಪ್ರಿಲ್ 16ರವರೆಗೆ ವಿಚಾರಣೆ ನಡೆಸಲಾಗುವುದು. ಮರುಸಂಧಾನ ಅಥವಾ ಯಾವುದೇ ತಕರಾರು ಇದ್ದರೆ ಏಪ್ರಿಲ್ 21ರಂದು ವಿಚಾರಣೆ ನಡೆಯಲಿದೆ. ನಂತರ, ಆಮಿಕರ್ ಕ್ಯೂರಿಗಳ ಅಭಿಪ್ರಾಯವನ್ನು ಪರಿಗಣಿಸಲಾಗುವುದು” ಎಂದು ಆದೇಶದಲ್ಲಿ ತಿಳಿಸಿತು.ಎಲ್ಲ ಪಕ್ಷಗಾರರು ಕಾಲಮಿತಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಪ್ರಕರಣದಲ್ಲಿ ಹಾಜರಾಗುವ ವಕೀಲರಿಗೆ ನ್ಯಾಯಾಲಯ ನಿರ್ದೇಶಿಸಿತು.
