ಉದಯವಾಹಿನಿ, ಬಹ್ರೈಚ್: ಉತ್ತರ ಪ್ರದೇಶದ ಬಹ್ರೈಚ್‌ನ ಕಟರ್ನಿಯಾಘಾಟ್ ವನ್ಯಜೀವಿ ಅಭಯಾರಣ್ಯದ ಭಾರತ-ನೇಪಾಳ ಗಡಿಯಲ್ಲಿರುವ ಕೊಥಿಯಾ ಘಾಟ್ ಬಳಿ ಕಾಡಾನೆಗಳ ಹಿಂಡು 70 ವರ್ಷದ ಪೂಜಾರಿ(ಅರ್ಚಕ)ಯೊಬ್ಬರನ್ನು ತುಳಿದು ಕೊಂದುಹಾಕಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಆನೆಗಳ ಘರ್ಜನೆ ಕೇಳಿ ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಸಿಬ್ಬಂದಿ, ಅವುಗಳನ್ನು ಅಲ್ಲಿಂದ ಓಡಿಸುವಲ್ಲಿ ಯಶಸ್ವಿಯಾದರು. ಆದರೆ, ಅಷ್ಟೊತ್ತಿಗಾಗಲೇ ಆನೆಗಳ ಹಿಂಡು ಅರ್ಚಕನನ್ನು ತುಳಿದು ಕೊಂದು ಹಾಕಿದ್ದವು. ಭಾನುವಾರ ತಡರಾತ್ರಿ ಈ ಘಟನೆ ಸಂಭವಿಸಿದ್ದು, ಆನೆ ದಾಳಿಯಿಂದ ಸ್ಥಳೀಯರಲ್ಲಿ ಭೀತಿ ಹೆಚ್ಚಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಘಟನಾ ಸ್ಥಳವು ಕಟಿಯಾರ ಬೀಟ್ ಅರಣ್ಯಕ್ಕೆ ಸೇರಿದ್ದಾಗಿದೆ. ಈ ಕಾಡಿನೊಳಗೆ ಕಟಿಯಾರ ಬಾಬಾ ಅವರ ಗುಡಿಸಲಿದ್ದು, ಅರ್ಚಕರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುತ್ತಿದ್ದರು. ಎಂದಿನಂತೆ ಭಾನುವಾರವೂ ಬಂದಿದ್ದರು. ಆದರೆ, ರಾತ್ರಿ ಆನೆಗಳ ಹಿಂಡು ಈ ಗುಡಿಸಲಿನ ಮೇಲೆ ಏಕಾಏಕಿ ದಾಳಿ ಮಾಡಿ ಗುಡಿಸಲನ್ನು ನಾಶಮಾಡಿವೆ. ಮೂರ್ನಾಲ್ಕು ಆನೆಗಳಿದ್ದವೆಂದು ಸ್ಥಳೀಯರು ಹೇಳುತ್ತಿದ್ದಾರೆ. ಗುಡಿಸಲಿನಲ್ಲಿದ್ದ ಪೂಜಾರಿಯನ್ನು ಸುತ್ತುವರೆದಿದ್ದಲ್ಲೇ ತುಳಿದು ಕೊಂದು ಹಾಕಿವೆ. ದಾಳಿಯಿಂದ ತಪ್ಪಿಸಿಕೊಳ್ಳಲಾಗವೇ ಅವರು ಕೊನೆಯುಸಿರೆಳೆದಿದ್ದಾರೆ. ಆನೆಗಳ ತುತ್ತೂರಿ ಶಬ್ದ ಕೇಳಿ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಅವುಗಳನ್ನು ಓಡಿಸಿದ್ದಾರೆ. ಆನೆಗಳು ಎಷ್ಟಿದ್ದವು ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ಹಾಗಾಗಿ ಗ್ರಾಮಸ್ಥರು ಹಾಗೂ ಸದ್ಯಕ್ಕೆ ಒಂಟಿಯಾಗಿ ಕಾಡಿಗೆ ಹೋಗದಂತೆ ಸಲಹೆ ನೀಡಿದ್ದೇವೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

“ಇಂತಹದ್ದೊಂದು ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಯಿತು. ಆನೆಗಳ ಚಟುವಟಿಕೆ ಹೆಚ್ಚಿದ್ದರಿಂದ, ಸ್ಥಳಕ್ಕೆ ತಲುಪುವುದು ಸವಾಲಿನ ಕೆಲಸವಾಗಿತ್ತು. ಆದರೂ ತೆರಳಲಾಯಿತು. ದಾಳಿ ವೇಳೆ ಆನೆಗಳು ಎಷ್ಟಿದ್ದವು ಎಂಬ ಮಾಹಿತಿ ಗೊತ್ತಾಗಿಲ್ಲ. ಆ ಕ್ಷಣಕ್ಕೆ ಪಟಾಕಿ ಸಿಡಿಸಿ ಆನೆಗಳನ್ನು ಹೆದರಿಸುವ ಪ್ರಯತ್ನ ಮಾಡಲಾಯಿತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮುಂದಿನ ಕ್ರಮ ಕೂಡ ಕೈಗೊಳ್ಳಲಾಗುತ್ತಿದೆ”ಎಂದು ಕತರ್ನಿಯಾಯಾಘಾಟ್ ರೇಂಜರ್ ಆಶಿಶ್ ಗೊಂಡ್ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!