ಉದಯವಾಹಿನಿ, ಗಾಂಧಿನಗರ(ಗುಜರಾತ್​): ರಾಜ್ಯದ ಅಹಮದಾಬಾದ್​ ಮತ್ತು ವಡೋದರ ನಗರಗಳ ಅನೇಕ ಶಾಲೆಗಳಿಗೆ ಇಂದು ಬಾಂಬ್​ ಬೆದರಿಕೆ ಬಂದಿದೆ. ಬೆದರಿಕೆಯಲ್ಲಿ ಭಾರತವನ್ನು ಖಲೀಸ್ತಾನವಾಗಿ ಮಾರ್ಪಡಿಸಲಾಗುವುದು ಎಂಬ ಉಲ್ಲೇಖ ಇರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟು 25 ಶಾಲೆಗಳಿಗೆ ಬಾಂಬ್​ ಬೆದರಿಕೆ ಕರೆ ಬಂದಿದೆ. ಇವುಗಳಲ್ಲಿ ವಡೋದರದ 11 ಶಾಲೆಗಳು ಸೇರಿವೆ. ಈ ಸಂದೇಶವು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಲ್ಲಿ ಸುರಕ್ಷತೆಯ ಕಳವಳ ಹುಟ್ಟು ಹಾಕಿದೆ. ಈ ಕುರಿತು ಸಚಿವೆ ರಿವಾಬಾ ಜಡೇಜಾ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಬಾಂಬ್​​ ಬೆದರಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಶಾಲೆ ಮತ್ತಿತರೆ ಸ್ಥಳಗಳಿಗೆ ಬಂದಿರುವ ಎಲ್ಲಾ ಬೆದರಿಕೆ ಸಂದೇಶಗಳನ್ನು ತನಿಖೆ ಮಾಡಲಾಗುವುದು ಎಂದು ಹೇಳಿದರು. ಬಾಂಬ್​ ಬೆದರಿಕೆ ಸಂದೇಶಗಳು ಬಂದಿರುವ ಶಾಲೆಗಳಲ್ಲಿ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲಾ ಶಿಕ್ಷಣಾಧಿಕಾರಿಗಳು ಸ್ಥಳೀಯ ಪೊಲೀಸರೊಂದಿಗೆ ಮುನ್ನೆಚ್ಚರಿಕಾ ಕ್ರಮಗಳ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚಿನ ದಿನದಲ್ಲಿ ಬಾಂಬ್​ ಬೆದರಿಕೆ ಪ್ರಕರಣಗಳು ಹೆಚ್ಚುತ್ತಿವೆ. ಕರ್ನಾಟಕದ ಧಾರವಾಡ ಹೈಕೋರ್ಟ್​ ಪೀಠ ಮತ್ತು ಕೊಡಗು ಜಿಲ್ಲಾ ನ್ಯಾಯಾಲಯಕ್ಕೂ ಇಂದು ಬಾಂಬ್ ಬೆದರಿಕೆ ಬಂದಿದ್ದು, ಪೊಲೀಸರು ಭದ್ರತಾ ಪರಿಶೀಲನೆ ನಡೆಸಿದ್ದಾರೆ. ಕಳೆದೆರಡು ದಿನಗಳ ಹಿಂದೆ ರಾಜಸ್ಥಾನದ ಅಜ್ಮೀರ್​ ನ್ಯಾಯಾಲಯಕ್ಕೂ ಕೂಡ ಇಂಥದ್ದೇ ಬೆದರಿಕೆ ಸಂದೇಶ ಬಂದಿತ್ತು. ​ಕರೆ ಬಂದ ನಂತರ ನ್ಯಾಯಾಲಯದ ಆಡಳಿತ ಸಿಬ್ಬಂದಿ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗೆ ಮಾಹಿತಿ ನೀಡಿತ್ತು. ಭದ್ರತಾ ಸಂಸ್ಥೆಗಳಿಗೆ ಎಚ್ಚರಿಕೆ ನೀಡಲಾಯಿತು. ನ್ಯಾಯಾಲಯದ ಆವರಣವನ್ನು ತಕ್ಷಣ ಸ್ಥಳಾಂತರಿಸಲಾಯಿತು. ನಂತರ ಭದ್ರತಾ ಸಂಸ್ಥೆಗಳು ಜಂಟಿ ಶೋಧ ಕಾರ್ಯಾಚರಣೆ ನಡೆಸಿದವು. ಆದರೆ, ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿರಲಿಲ್ಲ.

ಕಳೆದ ಶುಕ್ರವಾರ ದೆಹಲಿಯ ಹಲವು ಶಾಲೆಗಳಿಗೂ ಕೂಡ ಬಾಂಬ್​​ ಬೆದರಿಕೆ ಕರೆಗಳು ಬಂದಿದ್ದವು. ಸುಮಾರು 9 ಶಾಲೆಗಳಿಗೆ ಬೆಳಗ್ಗೆ 8.30ರಿಂದ 9ರ ಸುಮಾರಿಗೆ ಬಾಂಬ್​ ಬೆದರಿಕೆ ಕರೆಗಳು ಬಂದಿದ್ದು, ತಕ್ಷಣ ಬಾಂಬ್​ ನಿಷ್ಕ್ರಿಯ ದಳದ ಅಧಿಕಾರಿಗಳು, ಅಗ್ನಿ ಶಾಮಕ ದಳ ಮತ್ತು ಪೊಲೀಸ್​ ಸಿಬ್ಬಂದಿ ಕಾರ್ಯಾಚರಣೆ ನಡೆಸಿದವು. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಸುರಕ್ಷತೆಗಾಗಿ ಅವರ ಸ್ಥಳಾಂತರ ಕಾರ್ಯ ಸಾಗಿತ್ತು. ಸಂಪೂರ್ಣ ಶೋಧದ ಬಳಿಕ ಶಾಲೆಯ ಆವರಣದಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿರಲಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.

Leave a Reply

Your email address will not be published. Required fields are marked *

error: Content is protected !!